ಬೆಂಗಳೂರು: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಅದ್ಭುತ ಅರ್ಧಶತಕದೊಂದಿಗೆ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ, ಅವರು ಈ ಅಮೋಘ ಇನಿಂಗ್ಸ್ ನೀಡಿ ಭಾರತ ತಂಡದ ಬ್ಯಾಟಿಂಗ್ ಕುಸಿತವನ್ನು ರಕ್ಷಿಸಿದ್ದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಬ್ಯಾಟ್ನಲ್ಲಿ ಎಂಬುದು ವಿಶೇಷ.
ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ (ಮಾರ್ಚ್ 2) ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ವೇಗಿ ಮ್ಯಾಟ್ ಹೆನ್ರಿ ಮೂರನೇ ಓವರ್‌ನಲ್ಲಿ ಶುಬ್ಮನ್ ಗಿಲ್ ಅವರನ್ನು ಔಟ್ ಮಾಡಿದರು. ಬಳಿಕ ರೋಹಿತ್ ಶರ್ಮಾ (15) ಮತ್ತು ವಿರಾಟ್ ಕೊಹ್ಲಿ (11) ಕೂಡ ಸಣ್ಣ ಮೊತ್ತಕ್ಕೆ ಔಟಾದರು. ಹೀಗಾಗಿ ಭಾರತವು 6.4 ಓವರ್ಗಳಲ್ಲಿ 3 ವಿಕೆಟ್ಗೆ 30 ರನ್ ಬಾರಿ ಹಿನ್ನಡೆ ಅನುಭವಿಸಿತು.
ಅಗ್ರ ಕ್ರಮಾಂಕದ ಕುಸಿತದ ನಂತರ, ಶ್ರೇಯಸ್ ಅಯ್ಯರ್ ಮತ್ತು ಅಕ್ಷರ್ ಪಟೇಲ್ ನಾಲ್ಕನೇ ವಿಕೆಟ್ಗೆ ನಿರ್ಣಾಯಕ ಜೊತೆಯಾಟ ನೀಡಿದರು. 61 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಮೂಲಕ 42 ರನ್ ಗಳಿಸಿದ ಅಕ್ಷರ್ ಪಟೇಲ್ ಅವರ ವಿಕೆಟ್ ರಚಿನ್ ರವೀಂದ್ರ ಪಾಲಾಯಿತು.
ಅಕ್ಷರ್ ಔಟಾಗುವ ಒಂದೆರಡು ಓವರ್ಗಳ ಮೊದಲು ಶ್ರೇಯಸ್ ತಮ್ಮ ಅರ್ಧ ಶತಕವನ್ನು ದಾಖಲಿಸಿದರು. ಬಲಗೈ ಬ್ಯಾಟ್ಸ್ಮನ್ 75 ಎಸೆತಗಳಲ್ಲಿ ಮೈಲಿಗಲ್ಲನ್ನು ತಲುಪಿದ ನಂತರ ಬ್ಯಾಟ್ ಎತ್ತಿದರು. ಈ ವೇಳೆ ಅವರು ರೋಹಿತ್ ಶರ್ಮಾ ಅವರ ಬ್ಯಾಟ್ನಲ್ಲಿ ಆಡಿದ್ದು ಗೊತ್ತಾಯಿತು. ಬ್ಯಾಟ್ ಮೇಲಿದ್ದ ಸ್ಟಿಕ್ಕರ್ನಲ್ಲಿ “ಹಿಟ್ಮ್ಯಾನ್’ ಎಂದು ಬರೆದಿತ್ತು. ಹೀಗಾಗಿ ಅದನ್ನು ಅಭಿಮಾನಿಗಳು ಗುರುತಿಸಿದರು.
ಇತ್ತೀಚೆಗೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ರೋಹಿತ್ ಶರ್ಮಾ ಅವರ ಬ್ಯಾಟ್ ಅನ್ನು ಬಳಸಿದ್ದರು. ಅಲ್ಲಿ 67 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ ನಿರ್ಣಾಯಕ 56 ರನ್ ಗಳಿಸಿದರು.
ಮಾರ್ಚ್ 4ರಂದು ಭಾರತ-ಆಸ್ಟ್ರೇಲಿಯಾ ಸೆಮಿ ಫೈನಲ್
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಅಂತಿಮ ಗ್ರೂಪ್ ಹಂತದ ಪಂದ್ಯದ ಮುಕ್ತಾಯದ ನಂತರ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರ ಸೆಮಿಫೈನಲ್ ವೇಳಾಪಟ್ಟಿ ನಿಗದಿಯಾಗಿದೆ.
‘ಎ’ ಗುಂಪಿನಿಂದ ಭಾರತ ಮತ್ತು ನ್ಯೂಜಿಲೆಂಡ್ ಅರ್ಹತೆ ಪಡೆದರೆ, ‘ಬಿ’ ಗುಂಪಿನಿಂದ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ನಾಕೌಟ್ ಹಂತಕ್ಕೆ ಪ್ರವೇಶಿಸಿವೆ.
ಟೂರ್ನಿಯ ಮೊದಲ ಸೆಮಿಫೈನಲ್ನಲ್ಲಿ ಭಾರತ ತಂಡ ಮಾರ್ಚ್ 4ರಂದು ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಆಸೀಸ್ ತಂಡವನ್ನು ಎದುರಿಸಲಿದೆ.
ಬಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಮಾರ್ಚ್ 5 ರಂದು ಲಾಹೋರ್ನ ಗಡಾಫಿ ಕ್ರೀಡಾಂಗಣದಲ್ಲಿ ಗ್ರೂಪ್ ಎ ರನ್ನರ್ಸ್ ಅಪ್ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ.
ವಿಶೇಷವೆಂದರೆ, ಭಾರತ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಮ್ಮ ಅಭಿಯಾನವನ್ನು ಅಜೇಯವಾಗಿ ಮುಗಿಸಿದರೆ, ನ್ಯೂಜಿಲೆಂಡ್ ಒಂದು ಪಂದ್ಯದಲ್ಲಿ ಸೋತಿದೆ. ಆದರೆ, ಆಸ್ಟ್ರೇಲಿಯಾದ ಎರಡು ಪಂದ್ಯಗಳು ಮತ್ತು ದಕ್ಷಿಣ ಆಫ್ರಿಕಾದ ಒಂದು ಪಂದ್ಯ ರದ್ದಾಗಿತ್ತು.