ಬೆಂಗಳೂರು: ರಾಜಭವನದಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಶೋಕಾಸ್ ಬಂದಿದ್ದಕ್ಕೆ ಕಾಂಗ್ರೆಸ್ ಹೋರಾಟಕ್ಕೆ ಅಣಿಯಾಗಿದೆ.
ಸಿಎಂಗೆ ನೋಟಿಸ್ ನೀಡಲು ರಾಜಭವನವನ್ನು ಬಳಕೆ ಮಾಡಿಕೊಳ್ಳಲಾಗಿದೆ. ಈ ಹುನ್ನಾರದ ವಿರುದ್ಧ ಹೋರಾಡಲು ಕಾಂಗ್ರೆಸ್ ತೀರ್ಮಾನಿಸಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ (KC Venugopal) ಗುಡುಗಿದ್ದಾರೆ.
ಸಿಎಂ ನಿವಾಸ ಕಾವೇರಿಯಲ್ಲಿ ಸಚಿವರ ಜೊತೆ ಸಭೆ ನಡೆಸಿದ ನಂತರ ಪ್ರತಿಕ್ರಿಯಿಸಿದ ಅವರು, ಸಭೆಯಲ್ಲಿ ರಾಜ್ಯದ ಜನರಿಗೆ ಎಲ್ಲ ಸತ್ಯ ಗೊತ್ತಾಗುವಂತೆ ಮಾಡಿ ಎಂದು ಹೇಳಿದ್ದೇವೆ. ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಮಾಡುತ್ತಿರುವುದು ದೊಡ್ಡ ಜೋಕ್. ಬಿವೈ ವಿಜಯೇಂದ್ರ ವಿರುದ್ದ ಎಷ್ಟು ಪ್ರಕರಣಗಳಿಲ್ಲ? ಪ್ರಜ್ವಲ್ ರೇವಣ್ಣ ವಿರುದ್ದ ಎಷ್ಟು ಪ್ರಕರಣಗಳಿಲ್ಲ? ಇದಕ್ಕಾಗಿಯೇ ಸಿಎಂ ವಿರುದ್ದ ಅವರು ಮಾತಾಡುತ್ತಿದ್ದಾರೆ. ನಾವು ಭಯ ಪಡುತ್ತಿಲ್ಲ, ನಾವು ಅವರೆಲ್ಲರನ್ನೂ ಎದುರಿಸಲು ಸಿದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಬೀಳಲು ಬಿಜೆಪಿಯೇ ಕಾರಣವಾಗಿತ್ತು. ಈಗ ಬಿಜೆಪಿ ಮತ್ತೆ ಅದೇ ಮಾದರಿಯಲ್ಲಿ ಅಟ್ಯಾಕ್ ಮಾಡುತ್ತಿದೆ. ಪ್ರಜ್ವಲ್ ಪ್ರಕರಣದಲ್ಲಿ ಕಾಂಗ್ರೆಸ್ ವಿರುದ್ಧ ಹುನ್ನಾರ ಆಗಿದ್ದನ್ನು ಗಮನಿಸಬಹುದು. ಅವರವರ ಮಕ್ಕಳ ರಕ್ಷಣೆ ಮಾಡಿಕೊಳ್ಳಲು ಕಾಂಗ್ರೆಸ್ ವಿರುದ್ಧ ಆರೋಪ ಹೊರಿಸಿ, ಹಿಂದೆ ಸರಿಯುತ್ತಿರುವ ಹುನ್ನಾರ ನಡೆದಿದೆ ಎಂದು ಆರೋಪಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಪ್ರಾಮಾಣಿಕತೆ ಬಗ್ಗೆ ಇಡೀ ರಾಜ್ಯದ ಜನರಿಗೆ ಗೊತ್ತಿದೆ. ಅವರೇನು ಈ ರಾಜ್ಯಕ್ಕೆ ಹೊಸಬರಲ್ಲ. ಹಲವಾರು ದಶಕಗಳಿಂದ ರಾಜಕಾರಣ ಮಾಡುತ್ತಿದ್ದಾರೆ. ಅಲ್ಲಿಂದ ಇಲ್ಲಿಯವರೆಗೂ ಪ್ರಾಮಾಣಿಕತೆ ಉಳಿಸಿಕೊಂಡು ಬಂದಿದ್ದಾರೆ.
ಸಿದ್ದರಾಮಯ್ಯ ಚಾರಿತ್ರ್ಯದ ಬಗ್ಗೆ ರಾಜ್ಯದ ಜನರಿಗೆ ಅರಿವಿದೆ. ಸರ್ಕಾರ ಅಸ್ಥಿರಗೊಳಿಸಲು ಈ ರೀತಿಯ ಹುನ್ನಾರ ವಿಪಕ್ಷಗಳಿಂದ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಸಚಿವರು ಹಾಜರಿದ್ದರು.