ಬೆಂಗಳೂರು : ʼಪಾಕಿಸ್ತಾನ್ ಜಿಂದಾಬಾದ್’ ಕೂಗಿಸುವುದು ಕಾಂಗ್ರೆಸ್ ಸರ್ಕಾರದ ಅಜೆಂಡಾ ಆಗಿರುವಂತಿದೆ. ವಿಧಾನಸೌಧದಲ್ಲಿಯೇ ‘ಪಾಕಿಸ್ತಾನ್ ಜಿಂದಾಬಾದ್’ ಕೂಗಿದ ಕಾಂಗ್ರೆಸ್ ನಿಂದ ಉತ್ತೇಜನ ಪಡೆದ ರಾಷ್ಟ್ರದ್ರೋಹಿಗಳು ಈಗ ರಸ್ತೆ-ರಸ್ತೆಗಳಲ್ಲಿ ಪಾಕಿಸ್ತಾನ್ ಜಿಂದಾಬಾದ್ ಕೂಗಲು ಆರಂಭಿಸಿದ್ದಾರೆ. ಧರ್ಮಸ್ಥಳವಾಯಿತು, ಸಾಂಪ್ರದಾಯಿಕ ದಸರಾ ಉತ್ಸವಕ್ಕೆ ಕಳಂಕ ಹಚ್ಚಲು ನಿರ್ಧರಿಸಲಾಯಿತು, ಮದ್ದೂರು ಹಾಗೂ ರಾಜ್ಯದ ಇತರೆಡೆಗಳಲ್ಲಿ ಗಣೇಶೋತ್ಸವದ ಮೇಲೆ ಕಲ್ಲು ತೂರಾಟ ನಡೆಯಿತು. ಕರ್ನಾಟಕವನ್ನು ಕಾಂಗ್ರೆಸ್ ಸರ್ಕಾರ ಏನು ಮಾಡಲು ಹೊರಟಿದೆ? ಎಂದ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಆಕ್ರೋಶ ಹೊರ ಹಾಕಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಭದ್ರಾವತಿಯಲ್ಲಿ ದೇಶದ್ರೋಹಿ ಘೋಷಣೆ ಕೂಗಿದವರನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಅವರು ಆಗ್ರಹಿಸಿದ್ದಾರೆ.
ಮಾತ್ರವಲ್ಲದೇ, ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣಪತಿ ವಿಸರ್ಜನೆಯ ಮೆರವಣಿಗೆಯ ಮೇಲೆ ಕಲ್ಲುತೂರಾಟ ಹಾಗೂ ಪ್ರತಿಭಟನಾ ನಿರತ ಹಿಂದೂಗಳ ಮೇಲೆ ಲಾಠಿಚಾರ್ಜ್ ನಡೆದ ಘಟನಾ ಸ್ಥಳಕ್ಕೆ ಪಕ್ಷದ ನಿಯೋಗದೊಂದಿಗೆ ನಾಳೆ(ಬುಧವಾರ, ಸೆ. 10) ಭೇಟಿ ನೀಡಲಿದ್ದೇವೆ. ನಮ್ಮ ರಾಜ್ಯದಲ್ಲಿ ಆರ್ ಎಸ್ ಎಸ್ ಸೇರಿದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರನ್ನು ಚಾಮುಂಡಿ ಬೆಟ್ಟಕ್ಕೆ ಹೋಗುವುದನ್ನಾಗಲಿ, ಗಣಪತಿ ಉತ್ಸವ ಮಾಡುವುದನ್ನಾಗಲಿ ತಡೆಯಲು ಈ ಸರ್ಕಾರಕ್ಕೆ ಯಾವ ಅಧಿಕಾರವಿದೆ. ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗುವವರನ್ನು ಬಂಧಿಸಲು ಯೋಗ್ಯತೆ ಇಲ್ಲದ ಈ ಕಾಂಗ್ರೆಸ್ ಸರ್ಕಾರ ನಮ್ಮನ್ನು ಪ್ರಶ್ನೆ ಮಾಡುತ್ತಿದೆ. ಭಾರತೀಯ ಜನತಾ ಪಾರ್ಟಿ ಹಿಂದುತ್ವದ ಪರವಾಗಿದೆ ಹೌದು, ಪ್ರಶ್ನೆ ಮಾಡಲು ಇವರು ಯಾರು ? ಕರ್ನಾಟಕ ರಾಜ್ಯದಲ್ಲಿ ನಮ್ಮ ಸರ್ಕಾರ ಹಿಂದೂಗಳ ಪರವಾಗಿಲ್ಲಾ ಹಿಂದೂಗಳು ಸ್ವಯಂ ರಕ್ಷಣೆ ಮಾಡಿಕೊಳ್ಳಲಿ ಎಂದು ಮುಖ್ಯಮಂತ್ರಿಗಳು ಘೋಷಿಸಲಿ ಎಂದು ಕೆಂಡಾಮಂಡಲರಾಗಿದ್ದಾರೆ.


















