ಹಾವೇರಿ: ಸಿಎಂ ಸಿದ್ದರಾಮಯ್ಯ ಅವರು, ಬಿಜೆಪಿ ವಿರುದ್ಧ 50 ಕೋಟಿ ರೂ. ಆರೋಪ ಮಾಡಿದ್ದಾರೆ. ಕಾಂಗ್ರೆಸ್ ನ ಶಾಸಕರಿಗೆ ಬಿಜೆಪಿ 50 ಕೋಟಿಯ ಆಫರ್ ಮಾಡಿ ಸರ್ಕಾರ ಅಸ್ಥಿರಗೊಳಿಸುವ ಕಾರ್ಯ ಮಾಡುತ್ತಿದೆ ಎಂದು ಆರೋಪಿಸಿದ್ದರು. ಇದಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಸಿಎಂ ಹಲವಾರು ಹಗರಣಗಳಲ್ಲಿ ಸಿಲುಕಿದ್ದಾರೆ. ಅಲ್ಲದೇ, ಅಧಿಕಾರ ಹೋಗುವ ಭಯದಲ್ಲಿದ್ದಾರೆ. ಹೀಗಾಗಿ ಹತಾಶೆಯಲ್ಲಿ ಈ ರೀತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನನ್ನನ್ನು ಮುಟ್ಟಿದ್ರೆ ಕರ್ನಾಟಕದ ಜನ ಸುಮ್ಮನೇ ಬಿಡಲ್ಲ ಅಂತಾರೆ. ಹಾಗೆಯೇ ನನ್ನೊಂದಿಗೆ ನಿಲ್ಲಬೇಕೆಂದು ಜನರಿಗೆ ಸಿಎಂ ಅವರೇ ಮನವಿ ಮಾಡಿಕೊಳ್ಳುತ್ತಾರೆ. ಹಗರಣ ಹೊರ ಬರುತ್ತಿದ್ದಂತೆಯೇ ತಮ್ಮ ಬಗ್ಗೆ ತಾವೇ ಮಾತನಾಡುತ್ತಿದ್ದಾರೆ ಎಂದು ವಂಗ್ಯವಾಡಿದ್ದಾರೆ.
ಮುಖ್ಯಮಂತ್ರಿಗಳು 50 ಜನ ಕಾಂಗ್ರೆಸ್‌ನ ಶಾಸಕರನ್ನು ಖರೀದಿ ಮಾಡುತ್ತೇವೆ ಅಂತ ಆರೋಪ ಮಾಡಿದ್ದಾರೆ. 50 ಶಾಸಕರ ಖರೀದಿಗೆ 2,500 ಕೋಟಿ ರೂ. ಬೇಕಾಗುತ್ತದೆ. ಯಾರ ಬಳಿ ಇದೆ ಅಷ್ಟೊಂದು ಹಣ ಅನ್ನುವುದು ಬೇಕಲ್ಲವೇ ಎಂದು ಪ್ರಶ್ನಿಸಿದ ಅವರು ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗೆ ಇಳಿಯಲಿ ಎಂದು ಅವರದೇ ಪಕ್ಷದವರು ಕಾಯುತ್ತಿದ್ದಾರೆ. ಹೀಗಾಗಿ ನಾವು ಅವರನ್ನು ಅಧಿಕಾರದಿಂದ ಕೆಳಗೆ ಇಳಿಸುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ.