ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಹಾಗೂ ಆತನ ಸಹಚರರಿಗೆ ದಿನದಿಂದ ದಿನಕ್ಕೆ ಸಂಕಷ್ಟ ಹೆಚ್ಚಾಗುತ್ತಿದ್ದು, ಜೈಲು ಸೌಲಭ್ಯಗಳ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿ ದೂರು ನೀಡಿದ್ದ ನಟ ದರ್ಶನ್‌ಗೆ ಮತ್ತೆ ಹಿನ್ನಡೆಯಾಗಿದೆ. ಜೈಲಿನಲ್ಲಿ ನಟ ದರ್ಶನ್‌ಗೆ ನೀಡುತ್ತಿರುವ ಕನಿಷ್ಠ ಸೌಲಭ್ಯ ವಿಚಾರದ ಕಾನೂನು ಪ್ರಾಧಿಕಾರದ ವರದಿಯಿಂದ ಕೋಲಾಹಲ ಸೃಷ್ಟಿಯಾಗಿದೆ. ಈ ವರದಿ ದರ್ಶನ್ ವಿರುದ್ಧವಾಗಿದೆ ಎಂದು ಹೇಳಿದ್ದೇ ತಡ, ಸೆಲ್‌ನಲ್ಲಿ ನಟ ದರ್ಶನ್ ಕೂಗಾಡಿ, ನಾನು ಯಾರಿಗೆ ಅನ್ಯಾಯ ಮಾಡಿದ್ದೇನೆ, ನನಗೆ ಯಾಕೆ ಈ ಶಿಕ್ಷೆ, ನಾನು ಹೀಗೆ ಜೈಲಿನಲ್ಲೇ ಸಾಯಬೇಕಾ ಎಂದು ರಂಪಾಟ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಜೈಲಿನಲ್ಲಿ ನಟ ದರ್ಶನ್‌ಗೆ ಕನಿಷ್ಠ ಸೌಲಭ್ಯ ಒದಗಿಸಲಾಗುತ್ತಿಲ್ಲ ಎನ್ನುವ ಆರೋಪದ ಸತ್ಯಾಸತ್ಯೆ ಅರಿಯಲು ಕಾನೂನು ಪ್ರಾಧಿಕಾರ ತನಿಖೆ ನಡೆಸಿ ವರದಿ ನೀಡಿತ್ತು. ಈ ವರದಿ ದರ್ಶನ್‌ಗೆ ವಿರುದ್ದವಾಗಿದೆ ಎಂದು ನಟ ದರ್ಶನ್‌ಗೆ ಆಪ್ತರು, ಮ್ಯಾನೇಜರ್ ಹೇಳಿದ್ದಾರೆ. ಈ ಮಾತು ಕೇಳಿಸಿಕೊಂಡು ನಟ ದರ್ಶನ್ ಗರಂ ಆಗಿದ್ದಾರೆ. ನನಗೆ ಆಗುತ್ತಿರುವ ಸಮಸ್ಯೆ, ಇಲ್ಲಿನ ಕನಿಷ್ಠ ಸೌಲಭ್ಯಗಳ ಕುರಿತು ದೂರು ನೀಡಿದ್ದೇನೆ. ಆದರೆ ಈ ವರದಿ ನನ್ನ ವಿರುದ್ಧವಾಗಿದೆ ಎಂದರೆ ಏನು? ಎಲ್ಲರಿಗೂ ನನ್ನ ಕೈಲಾದಷ್ಟು ಸಹಾಯ ಮಾಡಿದ್ದೇನೆ. ಆದರೆ ನನಗೆ ಈ ರೀತಿ ಶಿಕ್ಷೆ, ನಾನು ಹೀಗೆ ಸಾಯಬೇಕಾ ಎಂದು ದರ್ಶನ್ ಜೈಲಿನಲ್ಲಿ ಸಹ ಖೈದಿಗಳ ಜೊತೆ ಕೂಗಾಡಿದ್ದಾರೆ.
ನಟ ದರ್ಶನ್ ಜೈಲಿನಲ್ಲಿ ಇಷ್ಟು ದಿನ ತೀವ್ರ ತಾಳ್ಮೆ ವಹಿಸಿದ್ದರು. ಆದರೆ ವರದಿ ವಿರುದ್ಧವಾಗಿದೆ ಎಂದಾಗ ತಾಳ್ಮೆ ಕಳೆದುಕೊಂಡಿದ್ದಾರೆ. ದರ್ಶನ್ ಕೋಪಗೊಂಡಿರುವುದನ್ನು ನೋಡಿದ ಸಹಚರರು ಗಾಬರಿಯಾಗಿದ್ದಾರೆ. ದರ್ಶನ್ ಮ್ಯಾನೇಜರ್ ನಾಗರಾಜ್ ಸಮಾಧಾನ ಮಾಡಲು ಪ್ರಯತ್ನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.