ಬಳ್ಳಾರಿ: ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಅಂಗಡಿಗಳು ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ (Ballari) ಸಂಡೂರು (Sandur) ತಾಲೂಕಿನ ತೋರಣಗಲ್ ನ ಜಿಂದಾಲ್ ಕಾರ್ಖಾನೆ ಬೈಪಾಸ್ ಹತ್ತಿರ ನಡೆದಿದೆ.
ಘಟನೆಯಲ್ಲಿ ಆಟೋಮೊಬೈಲ್ ಶಾಪ್, ಎಲೆಕ್ಟ್ರಿಕಲ್ ಹಾಗೂ ಹೋಟೆಲ್ ಬೆಂಕಿಗಾಹುತಿಯಾಗಿದೆ. ಬೆಂಕಿಯ ಕೆನ್ನಾಲೆಗೆ ಮೂರು ಅಂಗಡಿಗಳು ಸಿಲುಕಿ ಸುಟ್ಟು ಭಸ್ಮವಾಗಿವೆ. ಅಂಗಡಿಯಲ್ಲಿದ್ದ ಎಲೆಕ್ಟ್ರಿಕ್ ಬ್ಯಾಟರಿಗಳು, ಎಲೆಕ್ಟ್ರಿಕ್ ವಸ್ತುಗಳು ಹಾಗೂ ಹೋಟೆಲ್‌ನ ಫ್ರಿಜ್, ಟೇಬಲ್, ಕುರ್ಚಿಗಳು ಸೇರಿದಂತೆ ಸುಮಾರು 30 ಲಕ್ಷ ರೂ. ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.
ಬೆಂಕಿ ಹೊತ್ತುತ್ತಿದ್ದಂತೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಅಂಗಡಿಗಳು ಸುಟ್ಟು ಭಸ್ಮವಾಗಿದ್ದವು. ಘಟನೆ ಕುರಿತು ತೋರಣಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.