ಬೆಂಗಳೂರು: ಕರ್ನಾಟಕದ ಮುಜರಾಯಿ ವ್ಯಾಪ್ತಿಯ ದೇವಾಲಯಗಳಲ್ಲಿ ಇನ್ನು ಮುಂದೆ ಶೂಟಿಂಗ್‌ಗೆ ಬ್ರೇಕ್ ಹಾಕಲು ಕಟ್ಟುನಿಟ್ಟಿನ ನಿಯಮ ಜಾರಿ ಮಾಡಲಾಗಿದೆ. ಅನುಮತಿ ಪಡೆದು, ನಿಗದಿತ ಶುಲ್ಕ ಪಾವತಿಸಿದರೆ ಮಾತ್ರ ಚಿತ್ರೀಕರಣಕ್ಕೆ ಅವಕಾಶ ನೀಡಲಾಗುತ್ತದೆ.
ಕರ್ನಾಟಕ ಮುಜರಾಯಿ ಇಲಾಖೆ ವ್ಯಾಪ್ತಿಯ ‘ಎ’ ಮತ್ತು ‘ಬಿ’ ಗ್ರೇಡ್ ದೇವಾಲಯಗಳಲ್ಲಿ ಇನ್ನು ಮುಂದೆ ಶುಲ್ಕ ಕಡ್ಡಾಯಗೊಳಿಸಲಾಗಿದೆ. ಭಕ್ತಿಯ ಪಾವಿತ್ರ್ಯಕ್ಕೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿದರೆ ದಂಡ ವಿಧಿಸುವುದಾಗಿ ಇಲಾಖೆ ಎಚ್ಚರಿಕೆ ನೀಡಿದೆ.
ಈ ನೀತಿ ಹೊಸದಲ್ಲ. 2003 ಮತ್ತು 2012ರಲ್ಲಿ ಜಾರಿಗೊಂಡಿದ್ದ ಮಾರ್ಗಸೂಚಿಗಳನ್ನು ಇದೀಗ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಸಿನಿಮಾ, ಧಾರಾವಾಹಿ, ಸಾಕ್ಷ್ಯಚಿತ್ರ, ಸುದ್ದಿ ವಾಹಿನಿಗಳು ಸೇರಿದಂತೆ ಯಾವುದೇ ರೀತಿಯ ವಿಡಿಯೋ ರೆಕಾರ್ಡಿಂಗ್ ನಡೆಸಬೇಕಾದರೆ ಮುಜರಾಯಿ ಇಲಾಖೆಗೆ ನಿಗದಿತ ಶುಲ್ಕ ಪಾವತಿಸಿ ಅನುಮತಿ ಪಡೆಯಬೇಕು.
ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರುವ ಪ್ರೀ-ವೆಡ್ಡಿಂಗ್ ಶೂಟ್‌ಗಳು ಹಾಗೂ ದೇವಾಲಯಗಳೊಳಗೆ ಮೊಬೈಲ್ ಮೂಲಕ ರೀಲ್ಸ್ ಚಿತ್ರೀಕರಣ ಹೆಚ್ಚಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಶುಲ್ಕ ಪಾವತಿಸಿದ ನಂತರವೇ ಶೂಟಿಂಗ್‌ಗೆ ಅವಕಾಶ ದೊರೆಯಲಿದೆ.
ಒಟ್ಟು ಮುಜರಾಯಿ ದೇಗುಲಗಳು- 34,563
25 ಲಕ್ಷಕ್ಕೂ ಅಧಿಕ ಆದಾಯದ ಎ ಗ್ರೇಡ್ ದೇಗುಲಗಳು-205
5ರಿಂದ 25 ಲಕ್ಷ ರೂ. ಆದಾಯವಿರುವ ಬಿ ಗ್ರೇಡ್ ದೇಗುಲಗಳು- 193
5 ಲಕ್ಷಕ್ಕಿಂತ ಕಡಿಮೆ ಆದಾಯವಿರುವ ಸಿ ಗ್ರೇಡ್ ದೇಗುಲಗಳು-34,105
ಈ ಎಲ್ಲಾ ದೇವಾಲಯಗಳಿಗೂ ಮಾರ್ಗಸೂಚಿಗಳು ಅನ್ವಯವಾಗುತ್ತವೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಇದನ್ನೂ ಓದಿ : ಬೀದಿ ನಾಯಿಗಳ ಉಪಟಳಕ್ಕೆ ಕಡಿವಾಣ | ಜಿಬಿಎ ಮಹತ್ವದ ಹೆಜ್ಜೆ


















