ವ್ಯಾಂಕೋವರ್: ಖ್ಯಾತ ಹಾಸ್ಯ ನಟ ಕಪಿಲ್ ಶರ್ಮಾ ಅವರು ಕೆನಡಾದ ಸರೆಯಿಯಲ್ಲಿ ಹೊಸದಾಗಿ ತೆರೆದಿರುವ ‘ಕಪ್ಸ್ ಕೆಫೆ’ (Kap’s Cafe) ಮೇಲೆ ಬುಧವಾರ (ಜುಲೈ 9) ತಡರಾತ್ರಿ ಖಲಿಸ್ತಾನಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯ ಹೊಣೆಯನ್ನು ನಿಷೇಧಿತ ಭಯೋತ್ಪಾದಕ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್‌ಗೆ ಸಂಬಂಧಿಸಿರುವ ಹರ್‌ಜಿತ್ ಸಿಂಗ್ ಲಡ್ಡಿ ಹೊತ್ತುಕೊಂಡಿದ್ದಾನೆ. ಕಪಿಲ್ ಶರ್ಮಾ ಅವರ ಕಾರ್ಯಕ್ರಮವೊಂದರಲ್ಲಿ ನಿಹಾಂಗ್ ಸಿಖ್ಖರನ್ನು ಅಪಹಾಸ್ಯ ಮಾಡಿದ್ದರಿಂದಲೇ ಈ ದಾಳಿ ನಡೆಸಲಾಗಿದೆ ಎಂದು ಲಡ್ಡಿ ಹೇಳಿದ್ದಾನೆ.
ಕಪಿಲ್ ಶರ್ಮಾ ಅವರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಕಲಾವಿದರೊಬ್ಬರು ನಿಹಾಂಗ್ ಸಿಖ್ಖರ ಸಾಂಪ್ರದಾಯಿಕ ಉಡುಗೆ ಮತ್ತು ಅವರ ನಡವಳಿಕೆಗಳ ಬಗ್ಗೆ “ವ್ಯಂಗ್ಯಭರಿತ” ಹೇಳಿಕೆಗಳನ್ನು ನೀಡಿದ್ದರು. ಇದು ಸಿಖ್ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಲಡ್ಡಿ ಆರೋಪಿಸಿದ್ದಾನೆ. “ಕೇಜಿ ಹಾಸ್ಯದ ನೆಪದಲ್ಲಿ ಯಾವುದೇ ಧರ್ಮ ಅಥವಾ ಆಧ್ಯಾತ್ಮಿಕ ಗುರುತನ್ನು ಅಪಹಾಸ್ಯ ಮಾಡಬಾರದು” ಎಂದಿದ್ದಾನೆ.
ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ಲಡ್ಡಿ ಮತ್ತು ಬಿಕೆಐಗೆ ಸೇರಿರುವ ತೂಫಾನ್ ಸಿಂಗ್ ಸೇರಿ ಬುಧವಾರ ರಾತ್ರಿ ಬ್ರಿಟಿಷ್ ಕೊಲಂಬಿಯಾದ ಸರೆಯಿಯಲ್ಲಿರುವ ಕಪ್ಸ್ ಕೆಫೆ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಕೆನಡಾ ಸರ್ಕಾರವು ಬಿಕೆಐ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. ಲಡ್ಡಿ ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ಮೋಸ್ಟ್ ವಾಂಟೆಡ್ ಪಟ್ಟಿಯಲ್ಲೂ ಇದ್ದಾನೆ.
ಕಪಿಲ್ ಶರ್ಮಾ ಅವರ ಮ್ಯಾನೇಜರ್‌ಗೆ ನಮ್ಮ ಸಮುದಾಯದವರು ಹಲವು ಬಾರಿ ಕರೆ ಮಾಡಿದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. “ಕಪಿಲ್ ಶರ್ಮಾ ಸಾರ್ವಜನಿಕವಾಗಿ ಕ್ಷಮೆಯಾಚಿಸಲಿಲ್ಲವೇಕೆ?” ಎಂದೂ ಲಡ್ಡಿ ಪ್ರಶ್ನಿಸಿದ್ದಾನೆ.
ನಿಹಾಂಗ್ ಸಿಖ್ಖರು ಯಾರು?
ನಿಹಾಂಗ್ ಸಿಖ್ಖರು ಎಂದರೆ ಸಿಖ್ ಧರ್ಮದೊಳಗಿನ ವಿಶಿಷ್ಟ ಮತ್ತು ಸಾಂಪ್ರದಾಯಿಕ ಸಮರವೀರರೆಂದು ಕರೆಸಿಕೊಳ್ಳುವ ಗುಂಪು. ಅವರು ತಮ್ಮ ವಿಶಿಷ್ಟ ನೀಲಿ ಬಣ್ಣದ ವಸ್ತ್ರಗಳು, ಸಾಂಪ್ರದಾಯಿಕ ಆಯುಧಗಳು ಮತ್ತು ಸಾಂಪ್ರದಾಯಿಕ ಸಿಖ್ ಸಮರ ಪದ್ಧತಿಗಳಿಗೆ ಹೆಸರುವಾಸಿಯಾಗಿದ್ದಾರೆ.
ದಾಳಿ ನಡೆದಿದ್ದು ಹೇಗೆ?
ಕೆನಡಾದಲ್ಲಿ ಜುಲೈ 4ರಂದು ಕಪಿಲ್ ಶರ್ಮಾ ಅವರ ಕಪ್ಸ್ ಕೆಫೆ ಉದ್ಘಾಟನೆಗೊಂಡಿತ್ತು. “ಜುಲೈ 10ರ ಗುರುವಾರ 120 ಸ್ಟ್ರೀಟ್‌ನ 8400 ಬ್ಲಾಕ್‌ನಲ್ಲಿರುವ ಕೆಫೆಯೊಂದರಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಸರೆಯಿ ಪೊಲೀಸ್ ಸೇವೆಗೆ ಕರೆ ಬಂದಿತ್ತು” ಎಂದು ಸರೆಯಿ ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿದಾಗ, ಸಿಬ್ಬಂದಿ ಒಳಗಿದ್ದಾಗಲೇ ಕೆಫೆಯ ಮೇಲೆ ಗುಂಡು ಹಾರಿಸಿರುವುದು ತಿಳಿದುಬಂತು. ಅದೃಷ್ಟವಶಾತ್, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಶುಕ್ರವಾರ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಕೆಫೆ “ದಾಳಿಯಿಂದ ನಮಗೆ ಆಘಾತವಾಗಿದೆ. ಆದರೆ, ನಾವು ಹಿಂಸಾಚಾರದ ವಿರುದ್ಧ ದೃಢವಾಗಿ ನಿಲ್ಲುತ್ತೇವೆ” ಎಂದು ಹೇಳಿದೆ. “ನಾವು ರುಚಿಕರವಾದ ಕಾಫಿ ಮತ್ತು ಸ್ನೇಹಪರ ಸಂಭಾಷಣೆಯ ಮೂಲಕ ಸಂತೋಷವನ್ನು ತರುವ ಆಶಯದೊಂದಿಗೆ ಕಪ್ಸ್ ಕೆಫೆಯನ್ನು ತೆರೆದಿದ್ದೆವು. ಆ ಕನಸಿಗೆ ಹಿಂಸಾಚಾರವು ಅಡ್ಡಿಯಾಗಿರುವುದು ಬಹಳ ನೋವುಂಟು ಮಾಡಿದೆ. ಆಘಾತವಾಗಿದೆ, ಹಾಗಂತ ನಾವು ಎದೆಗುಂದುವುದಿಲ್ಲ” ಎಂದು ಕೆಫೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.



















