ಚಾಮರಾಜನಗರ: ಮುಜರಾಯಿ ಇಲಾಖೆಯಿಂದ ಅನುಮತಿ ಪಡೆಯದೆ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮಲಯಾಳಂ ಚಿತ್ರ ಶೂಟಿಂಗ್ ಮಾಡಿರುವ ಆರೋಪವೊಂದು ಕೇಳಿ ಬಂದಿದೆ.
ಈ ದೇವಸ್ಥಾನ ಬಂಡೀಪುರ ಅರಣ್ಯದಲ್ಲಿದ್ದರೂ ಮುಜರಾಯಿ ಇಲಾಖೆಗೆ ಸೇರಿದೆ. ಆದರೆ, ಇಲಾಖೆಯ ಅನುಪತಿ ಪಡೆಯದೆ ಶೂಟಿಂಗ್ ನಡೆಸಲಾಗಿದೆ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪನಾಗ್ ಹೇಳಿದ್ದಾರೆ.
ಯಾರೂ ನಮ್ಮ ಬಳಿ ಬಂದು ಶೂಟಿಂಗ್ ಪರ್ಮಿಷನ್ ಪಡೆದಿಲ್ಲ. ಅರಣ್ಯ ಇಲಾಖೆಯವರು ಸಹ ಚಿತ್ರೀಕರಣದ ಬಗ್ಗೆ ನಮ್ಮ ಗಮನಕ್ಕೆ ತಂದಿಲ್ಲ. ದೇವಸ್ಥಾನದ ಆವರಣದಲ್ಲಿ ಶೂಟಿಂಗ್ ನಡೆಸಲು ಅನುಮತಿ ನೀಡಿರುವ ಅರಣ್ಯ ಇಲಾಖೆಯವರು ನಮ್ಮ ಕಂದಾಯ ಅಥವಾ ಮುಜರಾಯಿ ಇಲಾಖೆಯಿಂದ ಎನ್ಓಸಿ ಪಡೆದಿಲ್ಲ.
ನಮ್ಮ ಅನಿಸಿಕೆಯನ್ನು ಕೂಡ ಕೇಳಿಲ್ಲ. ಸಿನಿಮಾ ಚಿತ್ರೀಕರಣದ ಬಗ್ಗೆ ಕಂದಾಯ ಇಲಾಖೆಗೆ ಯಾವುದೇ ಮಾಹಿತಿ ಇಲ್ಲ. ನೇರವಾಗಿ ರಾಜ್ಯ ಸರ್ಕಾರದ ಅರಣ್ಯ ಇಲಾಖೆಯ ಅಧೀನ ಕಾರ್ಯದರ್ಶಿಯಿಂದಲೇ ಅನುಮತಿ ನೀಡಲಾಗಿದೆ. ನಮ್ಮ ಗಮನಕ್ಕೆ ತಂದಿದ್ದರೆ ಗೊಂದಲ ಸೃಷ್ಟಿ ಆಗುತ್ತಿರಲಿಲ್ಲ. ಚಿತ್ರೀಕರಣ ಪ್ರಕರಣದ ಬಗ್ಗೆ ಪರಿಶೀಲಿಸಿ ವರದಿ ನೀಡಲು ಗುಂಡ್ಲುಪೇಟೆ ತಹಸೀಲ್ದರ್‌ಗೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.
ಮತ್ತೊಂದೆಡೆ ಅರಣ್ಯಾಧಿಕಾರಿಗಳ ವಿರುದ್ದ ರೈತ ಸಂಘದಿಂದ ಕೂಡ ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ. ಮಲಯಾಳಂ ಚಿತ್ರದ ಶೂಟಿಂಗ್ ಗೆ ಅವಕಾಶ ಕೊಟ್ಟಿದ್ಯಾಕೆ? ಅಲ್ಲಿ ಡಾಕ್ಯುಮೆಂಟರಿ ಚಿತ್ರೀಕರಣ ನಡೆದಿಲ್ಲ. ಕಮರ್ಷಿಯಲ್ ಸಿನಿಮಾದ ಚಿತ್ರೀಕರಣ ನಡೆದಿದೆ. ಪರಿಸರ ಸೂಕ್ಷ್ಮ ವಲಯದ ನಿಯಮಗಳನ್ನು ಅರಣ್ಯ ಇಲಾಖೆಯೇ ಗಾಳಿಗೆ ತೂರಿದೆ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಬೇಕು. ಇಲ್ಲವಾದರೆ ಏ. 15 ರಂದು ಗುಂಡ್ಲುಪೇಟೆಯಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಡಾ. ಗುರುಪ್ರಸಾದ್ ಹೇಳಿದ್ದಾರೆ.