ಬೆಂಗಳೂರು: ಇತ್ತೀಚೆಗೆ ಎಲ್ಲ ವಸ್ತುಗಳಲ್ಲೂ ಕಲಬೆರಕೆ ಸಾಮಾನ್ಯವಾಗಿ ಬಿಡುತ್ತಿದೆ. ಆಹಾರದಲ್ಲಿ ಕಲಬೆರಕೆ ಹೆಚ್ಚಾಗುತ್ತಿದ್ದು, ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಈ ಮಧ್ಯೆ ಕಾಫಿ, ಟೀ (Coffee-Tea) ಪ್ರಿಯರಿಗೂ ಶಾಕಿಂಗ್ ಸುದ್ದಿಯೊಂದು ಹೊರ ಬಿದ್ದಿದೆ. ಆಹಾರ ಸುರಕ್ಷತಾ ಇಲಾಖೆ ನಗರದ ಅನೇಕ ಕಡೆಗಳಲ್ಲಿ ಕಾಫಿ ಕಪ್ ಸಂಗ್ರಹಿಸಿ ಟೆಸ್ಟ್ ಮಾಡಿಸಿದೆ. ಟೆಸ್ಟ್ ವೇಳೆ ಕಪ್ ಗಳಲ್ಲಿ ಪ್ಲಾಸ್ಟಿಕ್ ಅಂಶ ಇರುವುದು ಪತ್ತೆಯಾಗಿದೆ. ಕಪ್ಗಳಲ್ಲಿ ಸುಮಾರು 50ರಷ್ಟು ಮೈಕ್ರಾನ್ಗಿಂತ ಹೆಚ್ಚು ಪ್ಲಾಸ್ಟಿಕ್ ಅಂಶವಿದ್ದು, ಬಿಸಿ ಕಾಫಿ ಹಾಕಿದಾಗ ಅದರ ಉಷ್ಣತೆಗೆ ಕಪ್ ನಲ್ಲಿರುವ ಪ್ಲಾಸ್ಟಿಕ್ ಕರಗುತ್ತದೆ ಎನ್ನಲಾಗಿದೆ.
ಹೀಗಾಗಿ ಕಪ್ ನ್ನು ಹೆಚ್ಚಾಗಿ ಬಳಸುವುದರಿಂದ ಕ್ಯಾನ್ಸರ್ ಬರುವ ಸಾದ್ಯತೆ ಹೆಚ್ಚಾಗಿದೆ ಎನ್ನಲಾಗಿದೆ. ಸದ್ಯ ಎಲ್ಲ ಹೋಟೆಲ್ ಗಳಲ್ಲಿ ಆಹಾರ ಸೇರಿದಂತೆ ಪಾನೀಯಗಳನ್ನು ಮನೆಗೆ ಪ್ಯಾಕ್ ಮಾಡಿ ತೆಗೆದುಕೊಂಡು ಹೋಗುತ್ತಿದ್ದಾರೆ. ಇದರಲ್ಲಿ ಪ್ಲಾಸ್ಟಿಕ್ ಅಂಶಗಳು ಕಂಡು ಬಂದಿವೆ ಎನ್ನಲಾಗುತ್ತಿದೆ.
ಈ ವರದಿ ಬರುತ್ತಿದ್ದಂತೆ ಪ್ಲಾಸ್ಟಿಕ್ ಮಿಕ್ಸ್ ಇರುವ ಕಾಫಿ ಕಪ್ ಗಳನ್ನು ಬ್ಯಾನ್ ಮಾಡಲು ಇಲಾಖೆ ಮುಂದಾಗಿದೆ. ಕೇವಲ 50 ಮೈಕ್ರಾನ್ ಗಿಂತ ಕಡಿಮೆ ಪ್ಲಾಸ್ಟಿಕ್ ಅಂಶ ಇರುವ ಕಪ್ ಗಳ ಬಳಕೆಗೆ ಸೂಚಿಸಲಾಗಿದೆ. ಹೀಗಾಗಿ ಆರೋಗ್ಯ ಅಧಿಕಾರಿಗಳು ಈ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.
ತುಂಬಾ ಜನರು ಆ ಕ್ಷಣಕ್ಕೆ ಕಾಫಿ, ಟೀ ಕುಡಿಯುವ ಸಲುವಾಗಿ ಪ್ಲಾಸ್ಟಿಕ್ ಕಪ್ ಬಳಕೆ ಮಾಡುತ್ತಾರೆ. ಆಫೀಸ್ ಗಳಲ್ಲೂ ಕೂಡ ಇದೇ ರೀತಿ ಕುಡಿಯುತ್ತಾರೆ. ಆದರೆ ಪ್ರತಿ ದಿನ ಬಳಕೆ ಮಾಡುವುದರಿಂದ ಆರೋಗ್ಯದ ಮೇಲೆ ಬಹಳ ಪರಿಣಾಮ ಬೀರುತ್ತದೆ. ಇದು ಮುಂದಕ್ಕೆ ಕ್ಯಾನ್ಸರ್ ಗೆ ಕಾರಣವಾಗುತ್ತದೆ ಎನ್ನಲಾಗುತ್ತಿದೆ. ಹೀಗಾಗಿ ಟೀ ಅಥವಾ ಕಾಫಿಯನ್ನು ಪ್ಲಾಸ್ಟಿಕ್ ಕಪ್ ನಲ್ಲಿ ಕುಡಿಯುವ ಮುನ್ನ ಹುಷಾರಾಗಿರಬೇಕು ಎನ್ನಲಾಗುತ್ತಿದೆ.