ನವದೆಹಲಿ/ದುಬೈ: ದುಬೈ ಏರ್ ಶೋನಲ್ಲಿ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ನಮಾನ್ಶ್ ಸ್ಯಾಲ್ ಅವರು ‘ತೇಜಸ್’ ಯುದ್ಧ ವಿಮಾನ ಅಪಘಾತದಲ್ಲಿ ಹುತಾತ್ಮರಾದ ನಂತರವೂ ಕಾರ್ಯಕ್ರಮವನ್ನು ಮುಂದುವರಿಸಿದ ಆಯೋಜಕರ ನಿರ್ಧಾರಕ್ಕೆ ಅಮೆರಿಕದ ವಾಯುಪಡೆ ಪೈಲಟ್ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಮೃತ ಭಾರತೀಯ ಪೈಲಟ್ ಮೇಲಿನ ಗೌರವಾರ್ಥವಾಗಿ ಅಮೆರಿಕದ ಪ್ರಮುಖ ಪೈಲಟ್ ತಮ್ಮ ಅಂತಿಮ ಹಾರಾಟ ಪ್ರದರ್ಶನವನ್ನು ರದ್ದುಗೊಳಿಸುವ ಮೂಲಕ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ಅಮೆರಿಕದ ವಾಯುಪಡೆಯ (USAF) ಎಫ್-16 ವೈಪರ್ ಡೆಮಾನ್ಸ್ಟ್ರೇಷನ್ ತಂಡದ ಕಮಾಂಡರ್ ಮೇಜರ್ ಟೇಲರ್ ‘ಫೆಮಾ’ ಹೈಸ್ಟರ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. “ನಮ್ಮ ಸಹೋದ್ಯೋಗಿ ಪೈಲಟ್ ಒಬ್ಬರು ಪ್ರಾಣ ಕಳೆದುಕೊಂಡ ಕೆಲವೇ ಗಂಟೆಗಳಲ್ಲಿ ಪ್ರದರ್ಶನ ಸ್ಥಳ ಸಹಜ ಸ್ಥಿತಿಗೆ ಮರಳಿದ್ದು, ಉತ್ಸಾಹದಿಂದ ಘೋಷಣೆಗಳು ಕೇಳಿ ಬರುತ್ತಿದ್ದದ್ದು ನನಗೆ ಆಘಾತ ತಂದಿದೆ,” ಎಂದು ಅವರು ಬರೆದುಕೊಂಡಿದ್ದಾರೆ.

“ಪ್ರದರ್ಶನ ಮುಂದುವರಿಯಬೇಕು (The show must go on) ಎಂದು ಜನ ಹೇಳುತ್ತಾರೆ. ಅದು ನಿಜ. ಆದರೆ ನೀವು ಹೋದ ಮೇಲೂ ಜನ ಇದೇ ಮಾತನ್ನು ಹೇಳುತ್ತಾರೆ ಎಂಬುದನ್ನು ನೆನಪಿಡಿ,” ಎಂದು ಹೈಸ್ಟರ್ ಮಾರ್ಮಿಕವಾಗಿ ಹೇಳಿದ್ದಾರೆ. ಈ ಕಾರಣಕ್ಕಾಗಿ ತಮ್ಮ ತಂಡ ಮತ್ತು ಇತರ ಕೆಲವು ತಂಡಗಳು ಅಂತಿಮ ಪ್ರದರ್ಶನವನ್ನು ರದ್ದುಗೊಳಿಸಲು ನಿರ್ಧರಿಸಿದ್ದಾಗಿ ಅವರು ತಿಳಿಸಿದ್ದಾರೆ.
ಶುಕ್ರವಾರ (ನವೆಂಬರ್ 21) ದುಬೈ ಏರ್ ಶೋನಲ್ಲಿ ಪ್ರದರ್ಶನ ನೀಡುತ್ತಿದ್ದಾಗ ಭಾರತದ ಹೆಮ್ಮೆಯ ತೇಜಸ್ ಯುದ್ಧ ವಿಮಾನವು ಪತನಗೊಂಡಿತ್ತು. ನೆಗೆಟಿವ್-ಜಿ (Negative-G) ಮ್ಯಾನುವರ್ ಅಥವಾ ತಿರುವು ಪಡೆಯುವಾಗ ನಿಯಂತ್ರಣ ತಪ್ಪಿ ವಿಮಾನವು ಅಲ್ ಮಕ್ತುಮ್ ವಿಮಾನ ನಿಲ್ದಾಣದ ರನ್‌ವೇ ಸಮೀಪ ಬಿದ್ದು ಬೆಂಕಿಗೆ ಆಹುತಿಯಾಗಿತ್ತು. ಈ ದುರ್ಘಟನೆಯಲ್ಲಿ ವಿಂಗ್ ಕಮಾಂಡರ್ ನಮನ್ಶ್ ಸ್ಯಾಲ್ ಅವರು ವಿಮಾನದಿಂದ ಹೊರ ಜಿಗಿಯಲಾಗದೆ (Eject) ಸಾವನ್ನಪ್ಪಿದ್ದರು.
ಅಂತಿಮ ವಿದಾಯ
ಭಾನುವಾರ ವಿಂಗ್ ಕಮಾಂಡರ್ ನಮಾನ್ಶ್ ಸ್ಯಾಲ್ ಅವರ ಪಾರ್ಥಿವ ಶರೀರವನ್ನು ತಮಿಳುನಾಡಿನ ಸೂಲೂರು ವಾಯುನೆಲೆಗೆ ತರಲಾಯಿತು. ನಂತರ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಅವರ ಹುಟ್ಟೂರಾದ ಪಟಿಯಾಲಕರ್ ಗ್ರಾಮಕ್ಕೆ ಕೊಂಡೊಯ್ಯಲಾಯಿತು. ಪೂರ್ಣ ಸೇನಾ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೃತ ಪೈಲಟ್ ಅವರ ಪತ್ನಿ ವಿಂಗ್ ಕಮಾಂಡರ್ ಅಫ್ಶಾನ್ ಅವರು ಕಣ್ಣೀರಿನ ನಡುವೆಯೂ ತಮ್ಮ ಪತಿಗೆ ಸೆಲ್ಯೂಟ್ ಹೊಡೆದು ಅಂತಿಮ ವಿದಾಯ ಹೇಳಿದ್ದು ಮನಕಲಕುವಂತಿತ್ತು.
ಇದನ್ನೂ ಓದಿ: ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣ | ಅಯೋಧ್ಯೆಯಲ್ಲಿ ನಾಳೆ ಪ್ರಧಾನಿ ಮೋದಿಯಿಂದ ಧಾರ್ಮಿಕ ಧ್ವಜಾರೋಹಣ


















