ತೆರಿಗೆ ಕಟ್ಟದೆ ವಂಚಿಸುತ್ತಿದ್ದ ಕಮರ್ಷಿಯಲ್ ಕಟ್ಟಡ ಮಾಲೀಕರಿಗೆ ಬಿಬಿಎಂಪಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.
ಪಾಲಿಕೆಗೆ ತೆರಿಗೆ ಕಟ್ಟದೆ ವಂಚಿಸುತ್ತಿದ್ದ ಕಮರ್ಷಿಯಲ್ ಕಟ್ಟಡಗಳನ್ನು ಗುರುತಿಸಿ ಬೀಗ ಹಾಕಲಾಗುತ್ತಿದೆ. ಓಟಿಎಸ್ ಸೌಲಭ್ಯ ನೀಡಿದರೂ ತೆರಿಗೆ ಕಟ್ಟದ ಕಟ್ಟಡಗಳಿಗೆ ಪಾಲಿಕೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಣಿಜ್ಯ ಕಟ್ಟಡಗಳ ಬಾಕಿ ತೆರಿಗೆ ಬರೋಬ್ಬರಿ 300 ಕೋಟಿ ರೂ. ಬಾಕಿ ಇದೆ. ಹೀಗಾಗಿ ಬಿಬಿಎಂಪಿ ಅಧಿಕಾರಿಗಳು ವಸೂಲಿಗೆ ಮುಂದಾಗಿದ್ದಾರೆ. ನಗರದಲ್ಲಿ ಅಂದಾಜು 23 ಲಕ್ಷ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಬರುತ್ತವೆ. ಈ ಪೈಕಿ 7 ಲಕ್ಷ ಆಸ್ತಿಗಳು ವಾಣಿಜ್ಯಕ್ಕಾಗಿ ಬಳಕೆಯಾಗುತ್ತಿವೆ. ಇವುಗಳಲ್ಲಿ ಅಂದಾಜು 2 ಲಕ್ಷ ವಾಣಿಜ್ಯ ಕಟ್ಟಡಗಳ ತೆರಿಗೆ ಬಾಕಿ ಇದೆ. ಇವುಗಳಿಂದ ಸುಮಾರು 300 ಕೋಟಿ ತೆರಿಗೆ ಬರಬೇಕಿದೆ. ಹೀಗಾಗಿ ತೆರಿಗೆ ಕಟ್ಟದ ಮಾಲೀಕರ ವಿರುದ್ಧ ಬಿಬಿಎಂಪಿ ಸಮರ ಸಾರಿದೆ.
ಈಗಾಗಲೇ ತೆರಿಗೆ ಕಟ್ಟದ 300ಕ್ಕೂ ಅಧಿಕ ಕಟ್ಟಡಗಳನ್ನು ಬಿಬಿಎಂಪಿ ಸಿಬ್ಬಂದಿ ಸೀಜ್ ಮಾಡಿ, ಬೀಗ ಜಡಿದಿದೆ. ಅಲ್ಲದೇ, ಬೀಗ ಜಡಿದ ವಾಣಿಜ್ಯ ಕಟ್ಟಡಗಳ ಮಾಲೀಕರಿಗೆ ನೋಟಿಸ್ ಕೂಡ ನೀಡಲಾಗಿದೆ. ನೋಟೀಸ್ ನೀಡಿದ 15 ದಿನಗಳಲ್ಲಿ ಬಾಕಿ ತೆರಿಗೆ ಕಟ್ಟಬೇಕು. ಇಲ್ಲವಾದರೆ ಬಿಬಿಎಂಪಿಯ 2020ರ ಕಾಯ್ದೆಯಡಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗುವುದು. ನಂತರ ನ್ಯಾಯಾಲಯದ ಅನುಮತಿ ಪಡೆದು ಕಟ್ಟಡ ಹರಾಜು ಹಾಕಲಾಗುವುದು ಎಂದು ನೋಟಿಸ್ ನಲ್ಲಿ ಸೂಚಿಸಲಾಗಿದೆ. ಹೀಗಾಗಿ ತೆರಿಗೆ ವಂಚಿಸುತ್ತಿದ್ದ ಕಟ್ಟಡ ಮಾಲೀಕರು ತೆರಿಗೆ ಕಟ್ಟಿಯೇ ಬಚಾವ್ ಆಗಬೇಕಿದೆ. ಇಲ್ಲವಾದರೆ ಆಸ್ತಿಗಳು ಕೈ ಬಿಟ್ಟು ಹೋಗಬಹುದು.