ಬೆಂಗಳೂರು: ಬಾಕಿ ತೆರಿಗೆ ಉಳಿಸಿಕೊಂಡ ಕಟ್ಟಡ ಮಾಲೀಕರಿಗೆ ಬಿಬಿಎಂಪಿ(BBMP) ಶಾಕ್ ನೀಡಿದೆ.
ನೋಟಿಸ್ ನೀಡಿದರೂ ಕ್ಯಾರೆ ಅನ್ನದ ಕಟ್ಟಡ ಮಾಲೀಕರಿಗೆ ಈಗ ಶಾಕ್ ಎದುರಾಗುತ್ತಿದೆ. ಮೊದಲ ಹಂತದಲ್ಲಿ ನಾಲ್ಕು ಕಟ್ಟಡಗಳ ಹರಾಜಿಗೆ ಪಾಲಿಕೆ ಸಿದ್ದತೆ ಮಾಡಿಕೊಂಡಿದೆ. ಈಗಾಗಲೇ ಬಾಕಿ ತೆರಿಗೆ ಉಳಿಸಿಕೊಂಡಿದ್ದಕ್ಕೆ ಬಿಬಿಎಂಪಿ ನೋಟಿಸ್ ಜಾರಿ ಮಾಡಿತ್ತು. ಇದರಲ್ಲಿ ದಾಸರಹಳ್ಳಿ(Dasarahalli) ವಲಯದಲ್ಲಿ ಎರಡು ಕಟ್ಟಡ, ಪೂರ್ವ ಹಾಗೂ ಬೊಮ್ಮನಹಳ್ಳಿ(Bommanahalli) ವಲಯಗಳಲ್ಲಿ ಒಂದು ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಲಾಗಿತ್ತು.
ದಾಸರಹಳ್ಳಿ ವಲಯದಲ್ಲಿ ಎಂ.ರಂಗಪ್ಪ(M. Rangappa) ಎಂಬುವವರಿಗೆ ಸೇರಿದ ಕಟ್ಟಡದ ಬಾಕಿ ತೆರಿಗೆ 1.85 ಕೋಟಿ ರೂ. ಇದೆ. ಈಗ ಈ ಕಟ್ಟಡ ಹರಾಜು ಹಾಕಲು ಪಾಲಿಕೆ ಮುಂದಾಗಿದೆ. ಈ ಕಟ್ಟಡವನ್ನು 12.92 ಕೋಟಿ ರೂ.ಗೆ ಹರಾಜು ಹಾಕಲು ನಿರ್ಧರಿಸಲಾಗಿದೆ. ಶಂಕರೇಗೌಡ ಎಂಬುವವರಿಗೆ ಸೇರಿದ್ದ ಕಟ್ಟಡದ ಬಾಕಿ ತೆರಿಗೆ 30.99 ಲಕ್ಷ ರೂ. ಇದೆ. ಈ ಕಟ್ಟಡವನ್ನು 15.61 ಕೋಟಿ ರೂ.ಗೆ ಹರಾಜು ಹಾಕಲಾಗುತ್ತಿದೆ. ಬೊಮ್ಮನಹಳ್ಳಿ ವಲಯದಲ್ಲಿನ ಎಂ.ಕುಮಾರ್ ಗೆ ಸೇರಿದ ಕಟ್ಟಡದ ಬಾಕಿ ತೆರಿಗೆ 31.94 ಲಕ್ಷ ರೂ. ಇದೆ. ಈ ಕಟ್ಟಡವನ್ನು 6.62 ಕೋಟಿ ರೂ.ಗೆ ಹರಾಜು ಹಾಕಲು ನಿರ್ಧರಿಸಲಾಗಿದೆ. ಪೂರ್ವ ವಲಯದ ಮೊಹಮ್ಮದ್ ಇಶಾಕ್ ಗೆ(Mohammad Ishaq) ಸೇರಿದ ಕಟ್ಟಡದ ಬಾಕಿ ತೆರಿಗೆ 11.22 ಲಕ್ಷ ರೂ. ತೆರಿಗೆ ಬಾಕಿ ಇದೆ. ಇದನ್ನು 10.49 ಕೋಟಿ ರೂ. ಗೆ ಹರಾಜು ಹಾಕಲು ನಿರ್ಧರಿಸಲಾಗಿದೆ.
ಈ ನಾಲ್ಕು ಕಟ್ಟಡಗಳಿಗೆ ಈಗಾಗಲೇ ನೋಟಿಸ್ ಜಾರಿ ಮಾಡಿ ಹರಾಜಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹರಾಜು ಪ್ರಕ್ರಿಯೆ ಫೆಬ್ರವರಿ 5 ಹಾಗೂ 6ರಂದು ನಡೆಯಲಿದೆ. ಹರಾಜಿನಲ್ಲಿ ಬಾಕಿ ಉಳಿದ ಹಣವನ್ನು ಕಟ್ಟಡ ಮಾಲೀಕರ ಅಕೌಂಟ್ ಗೆ ಜಮಾ ಮಾಡಲಾಗುವುದು ಎಂದು ಪಾಲಿಕೆ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್(Munish Moudgil) ಹೇಳಿದ್ದಾರೆ.