ಪ್ರಸ್ತುತ ನಡೆಯುತ್ತಿರುವ 2026ರ ಟಿ20 ವಿಶ್ವಕಪ್‌ನಲ್ಲಿ ಕಳಪೆ ಫಾರ್ಮ್‌ನಿಂದ ಬಳಲುತ್ತಿರುವ ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಆಜಂ ತಮ್ಮ ಪತನಕ್ಕೆ ತಾವೇ ಕಾರಣರಾಗಿದ್ದಾರೆ ಎಂದು ಮಾಜಿ ವೇಗಿ ಶೋಯೆಬ್ ಅಖ್ತರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಟೂರ್ನಿಯ ನಾಲ್ಕು ಪಂದ್ಯಗಳಲ್ಲಿ ಬಾಬರ್ ಕೇವಲ 66 ರನ್ ಕಲೆಹಾಕಿದ್ದು, ಅವರ ಮಂದಗತಿಯ ಬ್ಯಾಟಿಂಗ್ ತೀವ್ರ ಟೀಕೆಗೆ ಗುರಿಯಾಗಿದೆ.
ಬಾಬರ್ ಆಜಂ ಆಡಿರುವ ಮೂರು ಇನ್ನಿಂಗ್ಸ್‌ಗಳಲ್ಲಿ ಕೇವಲ 22.00ರ ಸರಾಸರಿ ಹಾಗೂ 115.78ರ ಸ್ಟ್ರೈಕ್ ರೇಟ್ ಹೊಂದಿದ್ದು, ಟಿ20 ಮಾದರಿಗೆ ಅವರ ಆಟ ಸೂಕ್ತವಲ್ಲ ಎಂದು ಮಾಜಿ ಆಟಗಾರರು ಅಭಿಪ್ರಾಯಪಟ್ಟಿದ್ದಾರೆ. ಭಾರತದ ವಿರುದ್ಧದ ಪಂದ್ಯದಲ್ಲಿ ಅಕ್ಷರ್ ಪಟೇಲ್ ಬೌಲಿಂಗ್‌ನಲ್ಲಿ ಕಳಪೆ ಶಾಟ್ ಆಡಿ ಔಟಾದ ನಂತರ ಅವರ ಮೇಲಿನ ಟೀಕೆಗಳು ಮತ್ತಷ್ಟು ಹೆಚ್ಚಾಗಿವೆ. ಆಧುನಿಕ ಟಿ20 ಕ್ರಿಕೆಟ್‌ಗೆ ತಕ್ಕಂತೆ ಬಿರುಸಿನ ಆಟವಾಡುವಲ್ಲಿ ಹಾಗೂ ರನ್ ಗಳಿಸುವಲ್ಲಿ ಅವರು ಸಂಪೂರ್ಣ ವಿಫಲರಾಗಿದ್ದಾರೆ.
ಅಖ್ತರ್ ಮತ್ತು ಹಫೀಜ್ ಟೀಕೆ
ಬಾಬರ್ ಈ ಮಾದರಿ ತಮಗೆ ಸೂಕ್ತವಲ್ಲ ಎಂಬುದನ್ನು ಮೊದಲೇ ನಿರ್ಧರಿಸಬೇಕಿತ್ತು ಮತ್ತು ಆಡುವುದೇ ಆದರೆ ಪವರ್‌ಪ್ಲೇನಲ್ಲೇ ಬ್ಯಾಟ್ ಮಾಡಬೇಕಿತ್ತು ಎಂದು ಶೋಯೆಬ್ ಅಖ್ತರ್ ‘ಗೇಮ್ ಆನ್ ಹೈ’ ಕಾರ್ಯಕ್ರಮದಲ್ಲಿ ಕಿಡಿಕಾರಿದ್ದಾರೆ. ಪವರ್‌ಪ್ಲೇನಲ್ಲಿ ಕಳಪೆ ಸ್ಟ್ರೈಕ್ ರೇಟ್ ಕಾರಣಕ್ಕೆ ಬಾಬರ್ ಅವರನ್ನು 4ನೇ ಕ್ರಮಾಂಕಕ್ಕೆ ಇಳಿಸಲಾಗಿದೆ ಎಂಬ ಕೋಚ್ ಮೈಕ್ ಹೆಸ್ಸನ್ ಹೇಳಿಕೆಯನ್ನು ಮಾಜಿ ನಾಯಕ ಮೊಹಮ್ಮದ್ ಹಫೀಜ್ ಕಟುವಾಗಿ ವಿರೋಧಿಸಿದ್ದಾರೆ. “ಬಾಬರ್ ಪವರ್‌ಪ್ಲೇಯನ್ನೂ ಬಳಸಿಕೊಳ್ಳುವುದಿಲ್ಲ, ನಂತರವೂ ವೇಗವಾಗಿ ಆಡುವುದಿಲ್ಲ ಎಂದಾದರೆ ಅವರು ತಂಡದಲ್ಲಿ ಏಕೆ ಆಡುತ್ತಿದ್ದಾರೆ?” ಎಂದು ಹಫೀಜ್ ಮರುಪ್ರಶ್ನಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಿರ್ಣಾಯಕ ಪಂದ್ಯ
ಸೂಪರ್-8 ಹಂತದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯಬೇಕಿದ್ದ ಪಾಕಿಸ್ತಾನದ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದು, ಉಭಯ ತಂಡಗಳಿಗೆ ತಲಾ ಒಂದು ಅಂಕ ಹಂಚಲಾಗಿದೆ. ಈ ಹಂತದಲ್ಲಿ ‘ಮೀಸಲು ದಿನ’ ಇಲ್ಲದಿರುವುದರಿಂದ, ಸಲ್ಮಾನ್ ಅಲಿ ಅಗಾ ನೇತೃತ್ವದ ಪಾಕಿಸ್ತಾನ ತಂಡಕ್ಕೆ ಮುಂದಿನ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಬಲಿಷ್ಠ ಇಂಗ್ಲೆಂಡ್ ಅನ್ನು ಎದುರಿಸಲಿದ್ದು, ಟೂರ್ನಿಯಲ್ಲಿ ಉಳಿಯಲು ಇದು ಕಡ್ಡಾಯ ಗೆಲುವಿನ ಅಗ್ನಿಪರೀಕ್ಷೆಯಾಗಿದೆ.
ಇದನ್ನೂ ಓದಿ: ವಿರಾಟ್-ಅನುಷ್ಕಾ ದಂಪತಿಯ ಸರಳತೆಗೆ ಫಿದಾ ಆದ ಪಾಪರಾಜಿಗಳು | ಏರ್‌ಪೋರ್ಟ್‌ನಲ್ಲಿ ಮುಗಿಬಿದ್ದ ಫೋಟೋಗ್ರಾಫರ್‌ಗಳು



















