ಶಿವಮೊಗ್ಗ : ವ್ಯಕ್ತಿಯೊಬ್ಬನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗದ ಗಾಜನೂರು ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ. ಶಿವಮೊಗ್ಗದ ಹೊಸಮನೆ ಬಡಾವಣೆ ನಿವಾಸಿ ಶ್ರೀನಿವಾಸ್ (36) ಮೃತ ವ್ಯಕ್ತಿ.
ಶ್ರೀನಿವಾಸ್ ಗಾರೆ ಕೆಲಸ ಮಾಡುತ್ತಿದ್ದ. ಗಾಜನೂರಿನಲ್ಲೂ ಸಹ ಗಾರೆ ಕೆಲಸಕ್ಕೆ ಹೋಗಿದ್ದ. ಈತ ಕಳೆದ ಮೂರು ದಿನಗಳಿಂದ ಅಲ್ಲಿಯೇ ಇದ್ದ. ನಿನ್ನೆ ರಾತ್ರಿ ಗಾಜನೂರು ಗ್ರಾಮದ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಪಕ್ಕದಲ್ಲಿ ಆತ ಇನ್ನೋರ್ವ ವ್ಯಕ್ತಿಯ ಜೊತೆ ಮದ್ಯ ಸೇವಿಸುತ್ತ ಕುಳಿತಿರುವುದನ್ನು ನೋಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಯಾವ ಕಾರಣಕ್ಕೆ ಕೊಲೆ ನಡೆದಿದೆ. ಕೊಲೆ ಮಾಡಿರುವುದು ಯಾರೆಂಬುದು ಇನ್ನೂ ತಿಳಿದು ಬಂದಿಲ್ಲ.
ಘಟನಾ ಸ್ಥಳಕ್ಕೆ ತುಂಗಾನಗರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶಿಲನೆ ನಡೆಸಿದ್ದಾರೆ. ಶ್ರೀನಿವಾಸ್ ಇರುವ ಕೆಲ ದೃಶ್ಯಗಳು ಕೃಷಿ ಪತ್ತಿನ ಸಹಕಾರ ಬ್ಯಾಂಕ್ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಆದರೆ ಕ್ಯಾಮೆರಾದಲ್ಲಿ ಇನ್ನೋರ್ವನ ಮುಖ ಸ್ಪಷ್ಟವಾಗಿ ಕಾಣುತ್ತಿಲ್ಲ. ಹೀಗಾಗಿ, ರಾತ್ರಿ ಇವರು ಮದ್ಯ ತರಲು ಯಾವ ಬಾರ್ಗೆ ಹೋಗಿದ್ದರು ಎಂಬುದರ ಬಗ್ಗೆ ಪೊಲೀಸರು ಸ್ಥಳೀಯ ಬಾರ್ ಹಾಗೂ ಎಂಆರ್ಪಿ ಅಂಗಡಿಗಳ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಶ್ರೀನಿವಾಸ್ ಜೊತೆ ಕುಡಿಯುತ್ತಿದ್ದ ವ್ಯಕ್ತಿಯ ಜೊತೆ ಜಗಳವಾಗಿ ಬಳಿಕ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ಮಹಾ ಶಿವರಾತ್ರಿ ಪ್ರಯುಕ್ತ ಭಾನುವಾರ GBA ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧ



















