ಶಿವಮೊಗ್ಗ | ಜಿಲ್ಲೆಯಲ್ಲಿ ಅಕ್ರಮವಾಗಿ ನಾಡ ಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವೊಂದು ಪತ್ತೆಯಾಗಿದೆ. ಶಿಕಾರಿಪುರ ತಾಲೂಕಿನ ಭದ್ರಾಪುರ ಗ್ರಾಮದ ಲಕ್ಷ್ಮಣಪ್ಪ ವೃತ್ತಿಯಲ್ಲಿ ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದು, ಇದರ ಜೊತೆಗೆ ನಾಡ ಬಂದೂಕು ತಯಾರಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಕಾರ್ಪೆಂಟರ್ ವೃತ್ತಿಯ ಲಕ್ಷ್ಮಣಪ್ಪ ಎಂಬವರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಮನೆಯಲ್ಲಿ ಅಕ್ರಮವಾಗಿ ನಾಡ ಬಂದೂಕುಗಳನ್ನು ತಯಾರು ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಲಕ್ಷ್ಮಣಪ್ಪ ಅವರ ಮನೆ ಮೇಲೆ ಶಿಕಾರಿಪುರ ಗ್ರಾಮಾಂತರ ಪೊಲೀಸರು ದಾಳಿ ಮಾಡಿ ಪರಿಶೀಲನೆ ನಡೆಸಿದಾಗ, ಅವರ ಪಕ್ಕದ ಮನೆಯಲ್ಲಿ ಏಳು ನಾಡ ಬಂದೂಕು ಹಾಗೂ ಬಂದೂಕು ತಯಾರು ಮಾಡಲು ಬಳಸುವ ವಸ್ತುಗಳು ಪತ್ತೆಯಾಗಿವೆ. ಅವುಗಳನ್ನು ವಶಕ್ಕೆ ಪಡೆಯಲಾಗಿದೆ.
ಲಕ್ಷ್ಮಣಪ್ಪ ಅಕ್ರಮವಾಗಿ ನಾಡ ಬಂದೂಕುಗಳನ್ನು ತಯಾರು ಮಾಡಿ ಮಾರಾಟ ಮಾಡುತ್ತಿದ್ದರು. ಇದುವರೆಗೆ 7 ಸಿಂಗಲ್ ಬ್ಯಾರಲ್ ಬಂದೂಕುಗಳನ್ನು ತಯಾರಿಸಿಟ್ಟಿದ್ದ ಲಕ್ಷ್ಮಣಪ್ಪ, ಯಾವುದೇ ಪರವಾನಗಿ ಇಲ್ಲದೆ ಶಸ್ತ್ರಾಸ್ತ್ರಗಳನ್ನು ನಿರ್ಮಿಸಿ ಗ್ರಾಮೀಣ ಪ್ರದೇಶದ ರೈತರಿಗೆ ಮಾರಾಟ ಮಾಡುತ್ತಿದ್ದನೆಂದು ತಿಳಿದುಬಂದಿದೆ. ಪ್ರಾಣಿಗಳ ಬೇಟೆಗಾಗಿ ಬಳಸುವ ಉದ್ದೇಶದಿಂದ ಈ ನಾಡ ಬಂದೂಕುಗಳನ್ನು ಸಿದ್ಧಪಡಿಸಿ ನೀಡುತ್ತಿದ್ದರು ಎಂಬ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸದ್ಯ ಶಸ್ತ್ರಾಸ್ತ್ರ ತಿದ್ದುಪಡಿ ಕಾಯ್ದೆಯಡಿ ಲಕ್ಷ್ಮಣಪ್ಪ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.
ಇದನ್ನೂ ಓದಿ : ವಸತಿ ಗೃಹದಲ್ಲಿ ಫಾರೆಸ್ಟ್ ವಾಚರ್ ಆತ್ಮಹತ್ಯೆ



















