ಶಿವಮೊಗ್ಗ : ಜಿಲ್ಲೆಯ ಹೊಸನಗರ ತಾಲೂಕಿನ ಹೂವಿನಕೋಣೆಯ ಸರ್ಕಾರಿ ಶಾಲೆಯಲ್ಲಿ ನೀರಿನ ತೊಟ್ಟಿಗೆ ಬೆರೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯೊಂದು ಪೊಲೀಸ್ ತನಿಖೆಯಿಂದ ಬಹಿರಂಗಗೊಂಡಿದೆ. ಶಾಲಾ ಬಾಲಕ ಹುಡುಗಾಟಿಕೆಯಿಂದ ನೀರಿನ ತೊಟ್ಟಿಗೆ ವಿಷ ಬೆರೆಸಿದ್ದಾಗಿ ತಿಳಿದು ಬಂದಿದೆ.
ಹೊಸನಗರ ತಾಲೂಕಿನ ಹೂವಿನಕೋಣೆ ಶಾಲೆಯಲ್ಲಿ ನೀರಿನ ತೊಟ್ಟಿಗೆ ವಿಷ ಬೆರೆಸಿದ್ದ ಕಾರಣ ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಘಟನೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಗಂಭೀರವಾಗಿ ಪರಿಗಣಿಸಿದ್ದ ಸಿಎಂ ಸಿದ್ದರಾಮಯ್ಯ ತಮ್ಮ ಅಧಿಕೃತ ಎಕ್ಸ್ ಖಾತೆಯ ಮೂಲಕ ಪ್ರತಿಕ್ರಿಯಿಸಿ, ʼಯಾವ ಭಯೋತ್ಪಾದನೆಗೂ ಕಡಿಮೆ ಇಲ್ಲದಂತಹ ಕೃತ್ಯʼ ಎಂದು ಹೇಳಿದ್ದಲ್ಲದೇ, ಶಿವಮೊಗ್ಗ ಎಸ್.ಪಿಗೆ ಖುದ್ದಾಗಿ ಕರೆ ಮಾಡಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸುವಂತೆ ಸೂಚನೆ ನೀಡಿದ್ದರು.
ತನಿಖೆಯಲ್ಲಿ ಶಾಲಾ ಬಾಲಕನೇ ವಿಷ ಬೆರೆಸಿರುವುದು ಬೆಳಕಿಗೆ ಬಂದಿದೆ. ಈ ಘಟನೆ ನಡೆಯುವ 15 ದಿನಗಳ ಹಿಂದೆ ಈತನ ಸ್ನೇಹಿತ ಫಿನಾಯಿಲ್ ಹಾಕಿದ್ದನ್ನು ಗಮನಿಸಿದ ಬಾಲಕ ನೀರಿಗೆ ವಿಷ ಬೆರೆಸಿದ್ದಾನೆ ಎಂದು ತನಿಖೆಯಿಂದ ಮಾಹಿತಿ ಲಭ್ಯವಾಗಿದೆ.