ಬೆಂಗಳೂರು: ಲಿಂಗೈಕ್ಯ ಶಿವಕುಮಾರ್ ಸ್ವಾಮೀಜಿ ಪುತ್ಥಳಿಯನ್ನು ದುಷ್ಕರ್ಮಿಯೊಬ್ಬ ವಿರೂಪಗೊಳಿಸಿದ್ದು, ನಾಡಿನೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ಇಲ್ಲಿನ ಗಿರಿನಗರ ಹತ್ತಿರದ ವೀರಭದ್ರನಗರ ಬಸ್ ನಿಲ್ದಾಣದ ಬಳಿ ಪ್ರತಿಷ್ಠಾಪಿಸಲಾಗಿದ್ದ ಶಿವಕುಮಾರ ಸ್ವಾಮೀಜಿಯ ಪುತ್ಥಳಿ ವಿರೂಪಗೊಳಿಸಿರುವ ಘಟನೆ ನಡೆದಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಕೃಷ್ಣ (34) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಬ್ಯಾಡರಹಳ್ಳಿ ಹತ್ತಿರದ ಭರತನಗರದ ಶಿವಕೃಷ್ಣ ನ.30ರಂದು ತಡರಾತ್ರಿ ದ್ವಿಚಕ್ರ ವಾಹನದಲ್ಲಿ ಬಂದು ಶಿವಕುಮಾರ ಸ್ವಾಮೀಜಿಯ ಪುತ್ಥಳಿ ವಿರೂಪಗೊಳಿಸಿ ಪರಾರಿಯಾಗಿದ್ದ. ಆರೋಪಿಯ ವಿರುದ್ಧ ಜಯ ಕರ್ನಾಟಕ ಜನಪರ ವೇದಿಕೆ ಸಂಘಟನೆ ಅಧ್ಯಕ್ಷ ಪರಮೇಶ್ ದೂರು ನೀಡಿದ್ದರು. ಅಲ್ಲದೇ, ಅಖಿಲ ಭಾರತ ವೀರಶೈವ ಮಹಾಸಭಾದ ವತಿಯಿಂದ ಪ್ರತಿಭಟನೆ ಕೂಡ ನಡೆದಿತ್ತು.
ಆರೋಪಿ ಶಿವಕೃಷ್ಣ ಮದುವೆಯಾಗಿರಲಿಲ್ಲ. ಹೀಗಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಈತ ಇತ್ತೀಚೆಗೆ ಕ್ರೈಸ್ತ ಮತದ ಪ್ರಭಾವಕ್ಕೆ ಒಳಗಾಗಿದ್ದ. ಫುಡ್ ಡೆಲಿವರಿಯಾಗಿ ಕೆಲಸ ಮಾಡುತ್ತಿದ್ದ ವೇಳೆ, ಶ್ರೀಗಳ ಪುತ್ಥಳಿ ನೋಡಿ, ರಾತ್ರಿ ಯಾರೂ ಇಲ್ಲದ ಸಂದರ್ಭದಲ್ಲಿ ತೆರಳ ವಿರೂಪಗೊಳಿಸಿದ್ದಾನೆ ಎನ್ನಲಾಗಿದೆ.
ಸದ್ಯ ಪೊಲೀಸ್ ತನಿಖೆ ವೇಳೆ ಏಸು ಕ್ರಿಸ್ತ ತನ್ನ ಕನಸಿನಲ್ಲಿ ಬಂದಿದ್ದ. ಹೀಗಾಗಿ ಪುತ್ಥಳಿ ನಾಶ ಮಾಡಿದ್ದೇನೆ ಎಂದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.