ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿದ ಪರಿಣಾಮ ಹಲವರು ಪ್ರಾಣ ಕಳೆದುಕೊಂಡಿದ್ದರು.
ಗಂಗಾವಳಿಯ ಒಡಲಿಗೆ ಗುಡ್ಡ ಸೇರಿದಂತೆ ವಾಹನ ಸಮೇತ ಹಲವರು ಬಿದ್ದು ಕಣ್ಮರೆಯಾಗಿದ್ದರು. ಹಲವರ ಶವ ಪತ್ತೆಯಾಗಿದ್ದರೆ, ಇನ್ನೂ ಕೆಲವರ ಶವ ಪತ್ತೆಯಾಗಿರಲಿಲ್ಲ. ಹೀಗಾಗಿ ಕಾರ್ಯಾಚರಣೆ ಮುಂದುವರೆದಿತ್ತು. ಸೆ. 25ರಂದು ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ಶವ ಸಿಕ್ಕಿತ್ತು. ಈಗ ಮಾನವನ ಮೂಳೆ ಪತ್ತೆಯಾಗಿದೆ.
ಕಾರ್ಯಾಚರಣೆಯಲ್ಲಿ ಮಾನವನ ದೇಹದ ಎರಡು ಮೂಳೆಗಳು ಪತ್ತೆಯಾಗಿವೆ. ಆದರೆ, ಅದು ಯಾರದ್ದು ಎಂಬುವುದು ಮಾತ್ರ ಗೊತ್ತಾಗಿಲ್ಲ. ಡಿಎನ್ ಎ ಟೆಸ್ಟ್ ಗೆ ರವಾನಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಸದ್ಯ ಶಿರೂರಿನ ಜಗನ್ನಾಥ್, ಗಂಗೆಕೊಳ್ಳದ ಲೋಕೇಶ್ ಶವಕ್ಕಾಗಿ ಶೋಧ ನಡೆಯುತ್ತಿದೆ.
ಇಬ್ಬರ ಶೋಧಕ್ಕಾಗಿ ಇಂದು 11ನೇ ದಿನವಾದರೂ ಕಾರ್ಯಾಚರಣೆ ಮುಂದುವರೆದಿದೆ. ಸೆ. 25ರಂದು ಅರ್ಜುನ್ ಮೃತದೇಹ ಪತ್ತೆಯಾಗಿತ್ತು. ನದಿಯಲ್ಲಿ ಶೋಧ ಕಾರ್ಯಾಚರಣೆ ವೇಳೆ ಅರ್ಜುನ್ ಚಲಾಯಿಸುತ್ತಿದ್ದ ಲಾರಿ ಕೂಡ ಸಿಕ್ಕಿತ್ತು. ಲಾರಿಯ ಕ್ಯಾಬಿನ್ನಲ್ಲೇ ಚಾಲಕ ಅರ್ಜುನ್ ಮೃತದೇಹ 2 ತುಂಡಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.