ಐಪಿಎಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಪರ ಆಡುತ್ತಿದ್ದ ಸೌರಾಷ್ಟ್ರ ಕ್ರಿಕೆಟಿಗ ಶೆಲ್ಡನ್ ಜಾಕ್ಸನ್ ವೃತ್ತಿಪರ ಕ್ರಿಕೆಟ್ಗೆ ಮಂಗಳವಾರ ವಿದಾಯ ಹೇಳಿದ್ದಾರೆ. ಅವರು ತಮ್ಮ 15 ವರ್ಷಗಳ ಕ್ರಿಕೆಟ್ ವೃತ್ತಿಜೀವನ ಕೊನೆಗೊಳಿಸಿದ್ದಾರೆ. ವಿಕೆಟ್ಕೀಪರ್ ಬ್ಯಾಟರ್ ಆಗಿದ್ದ ಅವರಿಗೆ ಭಾರತ ತಂಡದಲ್ಲಿ ಅವಕಾಶ ಸಿಗಲಿಲ್ಲ. ರಣಜಿ ಕ್ರಿಕೆಟ್ನಲ್ಲಿ ಅತ್ಯದ್ಭುತ ದಾಖಲೆಗಳನ್ನು ಹೊಂದಿದ್ದರ ನಡುವೆಯೂ ಭಾರತ ಜೆರ್ಸಿಯಲ್ಲಿ ಕಾಣಿಸಿಕೊಳ್ಳುವುದಕ್ಕೆ ಅವರಿಗೆ ಸಾಧ್ಯವಾಗಲಿಲ್ಲ.
ರಣಜಿ ಟ್ರೋಫಿಯ ನಾಲ್ಕನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗುಜರಾತ್ ತಂಡದ ವಿರುದ್ಧ ಸೌರಾಷ್ಟ್ರ ಇನ್ನಿಂಗ್ಸ್ ಮತ್ತು 98 ರನ್ಗಳಿಂದ ಸೋತ ಬೆನ್ನಲ್ಲೇ 38 ವರ್ಷದ ಜಾಕ್ಸನ್ ನಿವೃತ್ತಿ ಪ್ರಕಟಿಸಿದರು. ಹಿರಿಯ ಆಟಗಾರ ಈವರೆಗೂ 105 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. 45.80ರ ಬ್ಯಾಟಿಂಗ್ ಸರಾಸರಿಯಲ್ಲಿ 7283 ರನ್ ಗಳಿಸಿದ್ದಾರೆ. ಶೆಲ್ಡನ್ 21 ಶತಕ, 39 ಅರ್ಧಶತಕಗಳನ್ನುಬಾರಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 186.
ಜಾಕ್ಸನ್ ಒಬ್ಬ ಉತ್ತಮ ಬ್ಯಾಟ್ಸ್‌ಮನ್ ಜತೆಗೆ ವಿಶ್ವಾಸಾರ್ಹ ವಿಕೆಟ್ ಕೀಪರ್. ದೇಶೀಯ ಕ್ರಿಕೆಟ್ಗೆ 2006ರಲ್ಲಿ ಲಿಸ್ಟ್ ಎ ಮೂಲಕ ಪದಾರ್ಪಣೆ ಮಾಡಿದ್ದರು. 86 ಲಿಸ್ಟ್ ಎ ಏಕದಿನ ಪಂದ್ಯಗಳಲ್ಲಿ 14 ಅರ್ಧಶತಕ, 9 ಶತಕ ಸಹಿತ 2792 ರನ್ ಗಳಿಸಿದ್ದಾರೆ. ಐಪಿಎಲ್ನಲ್ಲಿ ಆಡಿರುವ 9 ಪಂದ್ಯ ಸೇರಿ 84 ಟಿ20 ಪಂದ್ಯಗಳಲ್ಲಿ 1812 ರನ್ ಗಳಿಸಿದ್ದಾರೆ.
ಶೆಲ್ಡನ್ ಜಾಕ್ಸನ್ ಐಪಿಎಲ್ ಜರ್ನಿ
ಶೆಲ್ಡನ್ ಜಾಕ್ಸನ್ ಐಪಿಎಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ಕೊಟ್ಟಿಲ್ಲ. 2013 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮೂಲಕ ಐಪಿಎಲ್ ಪ್ರವೇಶಿಸಿದ ಅವರಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. 2017ರಲ್ಲಿ ಕೆಕೆಆರ್ ಸೇರಿದ್ದರೂ ಆಡುವ ಬಳಗದಲ್ಲಿ ಸ್ಥಾನ ಪಡೆಯಲು ವಿಫಲರಾದರು. 2021ರಲ್ಲಿ ಆರ್ಸಿಬಿ ಸೇರಿದರೂ ಒಂದೇ ಒಂದು ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಹೀಗೆ ಐಪಿಎಲ್ನಲ್ಲಿ ಆಡಿರುವ 9 ಪಂದ್ಯಗಳಲ್ಲಿ 61 ರನ್ ಗಳಿಸಿದ್ದಾರೆ.
ರಣಜಿ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ
2012-13ರ ರಣಜಿ ಋತುವಿನಲ್ಲಿ 4 ಅರ್ಧಶತಕ, ಮೂರು ಶತಕ ಗಳಿಸುವ ಮೂಲಕ ಜಾಕ್ಸನ್ ಗಮನ ಸೆಳೆದಿದ್ದರು. ಕರ್ನಾಟಕ ಮತ್ತು ಪಂಜಾಬ್ ವಿರುದ್ಧ ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್‌ನಲ್ಲಿ ಸತತ ಶತಕ ಬಾರಿಸಿದ್ದರು. ಆ ವರ್ಷ ವೆಸ್ಟ್ ಇಂಡೀಸ್ ಎ ತಂಡದ ವಿರುದ್ಧದ ಸರಣಿಗೆ ಭಾರತ ಎ ತಂಡದಲ್ಲಿ ಸ್ಥಾನ ಪಡೆದಿದ್ದರು. 2015-16ರ ರಣಜಿ ಆವೃತ್ತಿಯಲ್ಲಿ ಸೌರಾಷ್ಟ್ರ ತಂಡವನ್ನು ಫೈನಲ್‌ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಹೆಚ್ಚಿನ ಅವಕಾಶಗಳು ಸಿಗಲಿಲ್ಲವೇಕೆ?
ಭಾರತ ತಂಡದಲ್ಲಿ ಈಗಾಗಲೇ ಅತ್ಯುತ್ತಮ ವಿಕೆಟ್‌ಕೀಪರ್‌ಗಳು (ಎಂಎಸ್ ಧೋನಿ, ರಿಷಭ್ ಪಂತ್, ಸಂಜು ಸ್ಯಾಮ್ಸನ್ ಮತ್ತು ದಿನೇಶ್ ಕಾರ್ತಿಕ್..) ಇದ್ದುದರಿಂದ ಶೆಲ್ಡನ್ಗೆ ಅವಕಾಶ ಸಿಗಲಿಲ್ಲ. ಐಪಿಎಲ್‌ನಲ್ಲಿ ತನ್ನ ಸಾಮರ್ಥ್ಯ ನಿರೂಪಿಸಲು ಸಾಧ್ಯವಾಗದೇ ಇರುವುದು ಹಿನ್ನಡೆಗೆ ಕಾರಣವಾಯಿತು.
ಕಳೆದ ತಿಂಗಳು ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಜಾಕ್ಸನ್, ಫಸ್ಟ್ ಕ್ಲಾಸ್ನಿಂದಲೂ ಹಿಂದೆ ಸರಿದಿದ್ದಾರೆ. ಭಾರತ ತಂಡದಲ್ಲಿ ಆಡಲು ಅವಕಾಶ ಸಿಗದಿದ್ದರೂ ನನ್ನ ವೃತ್ತಿಜೀವನದ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಜಾಕ್ಸನ್ ಪ್ರತಿಕ್ರಿಯಿಸಿದ್ದಾರೆ.