ಟಿಯಾಂಜಿನ್: ಚೀನಾದ ಟಿಯಾಂಜಿನ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಒಕ್ಕೂಟದ (SCO) ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಸಮ್ಮುಖದಲ್ಲಿಯೇ ಭಯೋತ್ಪಾದನೆಯನ್ನು ಬೆಂಬಲಿಸುವ ದೇಶಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಮೂಲಕ ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನಕ್ಕೆ ಕಪಾಳಮೋಕ್ಷ ಮಾಡಿದ್ದಾರೆ.
ಇತ್ತೀಚೆಗೆ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, “ಈ ದಾಳಿಯಲ್ಲಿ 26 ಅಮಾಯಕರನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಇದು ಕೇವಲ ಭಾರತದ ಆತ್ಮದ ಮೇಲಿನ ದಾಳಿಯಲ್ಲ, ಬದಲಿಗೆ ಮಾನವೀಯತೆಯಲ್ಲಿ ನಂಬಿಕೆ ಇಟ್ಟಿರುವ ಪ್ರತಿಯೊಂದು ದೇಶಕ್ಕೂ ಎದುರಾದ ಬಹಿರಂಗ ಸವಾಲಾಗಿದೆ,” ಎಂದರು. “ಕೆಲವು ದೇಶಗಳು ಭಯೋತ್ಪಾದನೆಗೆ ಬಹಿರಂಗವಾಗಿ ಬೆಂಬಲ ನೀಡುವುದನ್ನು ಒಪ್ಪಿಕೊಳ್ಳಲು ಸಾಧ್ಯವೇ?” ಎಂದು ಅವರು ಪ್ರಶ್ನಿಸಿದರು. ಈ ಸಂಕಷ್ಟದ ಸಮಯದಲ್ಲಿ ಭಾರತದ ಬೆನ್ನಿಗೆ ನಿಂತ ಮಿತ್ರ ರಾಷ್ಟ್ರಗಳಿಗೂ ಅವರು ಧನ್ಯವಾದ ತಿಳಿಸಿದರು.
ಭಯೋತ್ಪಾದನೆ ವಿರುದ್ಧ ಜಾಗತಿಕ ಸಮರಕ್ಕೆ ಕರೆ
ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, “ಭಯೋತ್ಪಾದನೆಯ ವಿಷಯದಲ್ಲಿ ಎರಡು ರೀತಿಯ ನಿಲುವುಗಳನ್ನು ಸ್ವೀಕರಿಸಲಾಗುವುದಿಲ್ಲ. ಭಯೋತ್ಪಾದನೆಯನ್ನು ಅದರ ಎಲ್ಲಾ ರೂಪಗಳಲ್ಲಿ ನಾವು ಒಕ್ಕೊರಲಿನಿಂದ ವಿರೋಧಿಸಬೇಕು. ಇದು ಮಾನವೀಯತೆಯ ಪರವಾಗಿ ನಮ್ಮೆಲ್ಲರ ಜವಾಬ್ದಾರಿಯಾಗಿದೆ,” ಎಂದು ಸ್ಪಷ್ಟಪಡಿಸಿದರು.
ಭಾರತವು ಕಳೆದ ನಾಲ್ಕು ದಶಕಗಳಿಂದ ಭಯೋತ್ಪಾದನೆಯಿಂದ ನಲುಗುತ್ತಿದ್ದು, ಅದೆಷ್ಟೋ ತಾಯಂದಿರು ತಮ್ಮ ಮಕ್ಕಳನ್ನು ಕಳೆದುಕೊಂಡಿದ್ದಾರೆ ಎಂದು ಪ್ರಧಾನಿ ಮೋದಿ ವಿಷಾದ ವ್ಯಕ್ತಪಡಿಸಿದರು.