ಬೆಂಗಳೂರು: ವ್ಯಕ್ತಿಯೊಬ್ಬ ಶೀಲ ಶಂಕಿಸಿ ಪತ್ನಿ (Wife) ಹಾಗೂ ಅತ್ತೆಯ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಈ ಘಟನೆ ಸಿಲಿಕಾನ್ ಸಿಟಿಯ ಬನಶಂಕರಿಯಲ್ಲಿ ನಡೆದಿದೆ. ಜ.14ರಂದು ಬನಶಂಕರಿ ದೇಗುಲದ ಹಿಂಭಾಗದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಯನ್ನು ಆಸೀಫ್ ಎನ್ನಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆಸೀಫ್ ತನ್ನ ಪತ್ನಿ ಹೀನಾ ಕೌಸರ್ (25) ಅತ್ತೆ ಫರ್ವಿನ್ ತಾಜ್ ಮೇಲೆ ದಾಳಿ ನಡೆಸಿದ್ದಾನೆ.
ತಾಯಿಯ ಅಣ್ಣನ ಮಗ ಆಸೀಫ್‌ನ ಜೊತೆ ಹೀನಾ ಕೌಸರ್ ಮದುವೆ ಮಾಡಿಸಲಾಗಿತ್ತು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ, ಇತ್ತೀಚೆಗೆ ಆಸೀಫ್ ಗೆ ಪರಸ್ತ್ರೀಯ ಸಂಘ ಶುರುವಾಗಿತ್ತು. ಹೀಗಾಗಿ ಪತ್ನಿಯ ಮೇಲೆ ಆಗಾಗ ಹಲ್ಲೆ ಮಾಡುತ್ತಿದ್ದ. ಪತ್ನಿ ಕಾಲೇಜು ಸ್ನೇಹಿತರಿಗೆ ಮೆಸೆಜ್ ಮಾಡಿದ್ದನ್ನೇ ಮುಂದಿಟ್ಟುಕೊಂಡು ಅಕ್ರಮ ಸಂಬಂಧ ಇದೆ ಎಂದು ಇತ್ತೀಚೆಗೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ತಲ್ವಾರ್ ನಿಂದ ಹಲ್ಲೆ ಮಾಡಿದ್ದರಿಂದಾಗಿ ಅತ್ತೆ ಹಾಗೂ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿರುವ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.