ಮದುವೆಯಾದ ನಂತರ ಗಂಡನು ಹೆಂಡತಿಯ ಓದಿಗೆ ನೆರವಾಗುತ್ತಾನೆ. ಮಗುವನ್ನು ತಾನು ನೋಡಿಕೊಂಡು, ಹೆಂಡತಿಯ ಓದಿಗೆ ಹಣ ಗಳಿಸುತ್ತಾನೆ. ಹೆಂಡತಿ ಚೆನ್ನಾಗಿ ಓದಿ ಐಎಎಸ್ ಅಧಿಕಾರಿಯಾಗುತ್ತಾಳೆ. ಹೌದು, ಇದು ಸಿನಿಮಾದ ಕತೆಯೇ. ಆದರೆ, ಸಿನಿಮಾದ ಕತೆಯನ್ನೇ ಮೀರಿಸುವಂತೆ, ಮಗ ಜನಿಸಿದ 17ನೇ ದಿನಕ್ಕೆ ಯುಪಿಎಸ್ಸಿ ಪರೀಕ್ಷೆ ಬರೆದು, ಅದರಲ್ಲಿ ದೇಶಕ್ಕೇ 45ನೇ ರ್ಯಾಂಕ್ ಪಡೆದುಕೊಂಡಿದ್ದಾರೆ ಕೇರಳದ ಮಾಳವಿಕಾ ನಾಯರ್. ಇವರ ಜರ್ನಿಯು ಯಾವ ಸಿನಿಮಾಗೂ ಸಾಟಿ ಇಲ್ಲ ಎನಿಸೋದು ಇದೇ ಕಾರಣಕ್ಕೆ.
ಮಗು ಜನಿಸಿದ 17ನೇ ದಿನಕ್ಕೆ ಪರೀಕ್ಷೆ
ರಿಸಲ್ಟ್ ಬಳಿಕ ದೇಶಕ್ಕೇ 45ನೇ ರ್ಯಾಂಕ್
ಇದು ಕೇರಳ ನಾರಿಯ ಸಕ್ಸೆಸ್ ಸ್ಟೋರಿ
ಹೌದು, 2023ರ ಸೆಪ್ಟೆಂಬರ್ 20ರಂದು ಐಎಎಸ್ ಮುಖ್ಯ ಪರೀಕ್ಷೆ ಇತ್ತು. ಅದಾಗಲೇ ಮಾಳವಿಕಾ ಜಿ ನಾಯರ್ ಅವರು ತುಂಬು ಗರ್ಭಿಣಿಯಾಗಿದ್ದರು. ಹಾಗಂತ ಅವರು ಪರೀಕ್ಷೆಗೆ ತಯಾರಿ ಮರೆತಿರಲಿಲ್ಲ. ಇನ್ನು, ಸೆಪ್ಟೆಂಬರ್ 3ರಂದು ಮಾಳವಿಕಾ ಅವರು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದರು. ಮಾಳವಿಕಾ ಸೇರಿ ಕುಟುಂಬಸ್ಥರೆಲ್ಲರಿಗೂ ಖುಷಿಯೋ ಖುಷಿ. ಆದರೆ, ಮಾಳವಿಕಾ ಅವರು ಪರೀಕ್ಷೆ ಬರೆಯಲೇಬೇಕಿತ್ತು. ಕೊನೆಗೆ ಅವರು ಪರೀಕ್ಷೆ ಬರೆಯಲು ತೀರ್ಮಾನಿಸಿದರು.

ಹೆರಿಗೆ ನಂತರೂ ಪರೀಕ್ಷೆ ಬರೆಯಲು ತೀರ್ಮಾನ
ಹಸಿ ಮೈಯಲ್ಲಿ ಪರೀಕ್ಷಾ ಕೇಂದ್ರಕ್ಕೆ ತೆರಳಿದ ದಿಟ್ಟೆ
ಮಗುವಿಗೆ ಹಾಲು ಕುಡಿಸಿ ಹೊರಟಿದ್ದು ಯುಪಿಎಸ್ಸಿ ಯುದ್ದಕ್ಕೆ
ಮಗ ಜನಿಸಿದ ಬಳಿಕ ಯುಪಿಎಸ್ಸಿ ಪರೀಕ್ಷೆಗೆ 17 ದಿನ ಬಾಕಿ ಇತ್ತು. ಅದಾಗಲೇ ತೀರ್ಮಾನ ಮಾಡಿದ್ದ ಮಾಳವಿಕಾ, ಸೆಪ್ಟೆಂಬರ್ 20ರಂದು ಮಗನಿಗೆ ಎದೆಹಾಲು ಕುಡಿಸಿದವರೇ ಪರೀಕ್ಷೆಗೆ ಹೊರಟು ನಿಂತರು. ಕರುಳಿನ ಕುಡಿಯನ್ನು ಮನೆಯಲ್ಲೇ ಬಿಟ್ಟು ಪರೀಕ್ಷೆ ಬರೆದ ಮಾಳವಿಕಾ ಅವರಿಗೆ 2024ರಲ್ಲಿ ಫಲಿತಾಂಶ ಪ್ರಕಟವಾದಾಗ ಕಣ್ಣಲ್ಲಿ ನೀರು ಜಿನುಗಿತ್ತು. ಏಕೆಂದರೆ, ಯುಪಿಎಸ್ಸಿ ಪರೀಕ್ಷೆಯಲ್ಲಿ ಮಾಳವಿಕಾ ನಾಯರ್ ದೇಶಕ್ಕೇ 45ನೇ ರ್ಯಾಂಕ್ ಪಡೆದುಕೊಂಡಿದ್ದರು.
2 ಬಾರಿ ಯುಪಿಎಸ್ಸಿ ಪಾಸಾಗಿದ್ದರೂ ಕನಸು ಕಾಡುತ್ತಿತ್ತು
ಐಎಎಸ್ ಅಧಿಕಾರಿಯ ಕನಸೊಂದು ಬಾಕಿ ಇತ್ತು
ಕೊನೆಗೂ ಅದನ್ನು ನನಸು ಮಾಡಿಕೊಂಡ ಮಾಳವಿಕಾ

ಐಎಎಸ್ ಅಧಿಕಾರಿಯಾಗುವ ಮೊದಲು ಮಾಳವಿಕಾ ಅವರು ಎರಡು ಬಾರಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸಾಗಿದ್ದರು. ಆದರೆ, ರ್ಯಾಂಕ್ ಇರದ ಕಾರಣ ಅವರು ಇಂಡಿಯನ್ ರೆವೆನ್ಯೂ ಸರ್ವಿಸ್ ಅಥವಾ ಐಆರ್ ಎಸ್ ಹುದ್ದೆಗೆ ತೃಪ್ತಿಪಟ್ಟುಕೊಂಡಿದ್ದರು. ಆದ್ರೆ, ಐಎಎಸ್ ಅಧಿಕಾರಿಯಾಗಬೇಕು ಎಂಬುದು ಮಾಳವಿಕಾ ಅವರ ಕನಸಾಗಿತ್ತು. ಹಾಗಾಗಿ, ಸತತ ಶ್ರಮವಹಿಸಿ, ಹಗಲು-ರಾತ್ರಿ ಅಧ್ಯಯನ ಮಾಡಿ ಕೊನೆಗೂ ಐಎಎಸ್ ಅಧಿಕಾರಿಯಾದರು.
ಮಾಳವಿಕಾ ಪತಿಯೂ ಐಪಿಎಸ್ ಅಧಿಕಾರಿ
ಪತ್ನಿಯ ಯಶಸ್ಸಿಗೆ ಪತಿಯೂ ನೆರವು
ಮನೆಯಲ್ಲಿ ಇಬ್ಬಿಬ್ಬರು ಹಿರಿಯ ಅಧಿಕಾರಿಗಳು
ಮಾಳವಿಕಾ ನಾಯರ್ ಅವರ ಯಶಸ್ಸಿನ ಹಿಂದೆ ಕುಟುಂಬಸ್ಥರ ನೆರವು ದೊಡ್ಡದಿದೆ. ಇದನ್ನು ಮಾಳವಿಕಾ ಅವರೇ ನೆನಪಿಸಿಕೊಂಡಿದ್ದಾರೆ. ಇನ್ನು, ಮಾಳವಿಕಾ ನಾಯರ್ ಅವರ ಪತಿ ನಂದಗೋಪನ್ ಅವರು ಕೂಡ ಐಪಿಎಸ್ ಅಧಿಕಾರಿಯಾಗಿದ್ದಾರೆ. ಇವರ ಕುಟುಂಬದಲ್ಲಿ ಪತಿ-ಪತ್ನಿಯು ಹುನ್ನತ ಹುದ್ದೆಯಲ್ಲಿದ್ದಾರೆ. ಮಲಪ್ಪುರಂ ಜಿಲ್ಲೆಯಲ್ಲಿ ನಂದಗೋಪನ್ ಅವರು ಐಪಿಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇಷ್ಟೆಲ್ಲ ಯಶಸ್ಸು ಸಿಕ್ಕರೂ ಮಾಳವಿಕಾ ಹಾಗೂ ನಂದಗೋಪನ್ ಅವರ ತಲೆ ಹೆಗಲ ಮೇಲೆಯೇ ಇದೆ. “ನನ್ನ ಯಶಸ್ಸಿನ ಹಿಂದೆ ಪತಿಯ ಶ್ರಮ, ತ್ಯಾಗ, ನೆರವು ಹೆಚ್ಚಿದೆ’’ ಎಂದು ಮಾಳವಿಕಾ ಹೇಳಿದ್ರೆ, “ಅವಳ ಶ್ರಮ, ತಾಳ್ಮೆಯು ಪ್ರತಿಫಲ ನೀಡಿದೆಯಷ್ಟೇ’” ಎಂದು ನಂದಗೋಪನ್ ಎಲ್ಲ ಶ್ರೇಯಸ್ಸನ್ನು ಪತಿಗೇ ನೀಡುತ್ತಾರೆ. ಎಲ್ಲ ಇದ್ದೂ ಕೊರಗುವವರಿಗೆ, ಸಣ್ಣ ಹಿನ್ನಡೆಗೂ ಮರಗುವವರಿಗೆ ಈ ಜೋಡಿಯ ಯಶಸ್ಸೇ ನಿದರ್ಶನವಾಗಿದೆ. ಇಂತಹವರ ಸಂತತಿ ಸಾವಿರವಾಗಲಿ…



















