ಬಳ್ಳಾರಿ: ಮಹಿಳೆಯೊಬ್ಬಳು ಬರೋಬ್ಬರಿ 8 ಜನರನ್ನು ಮದುವೆಯಾಗುವುದಾಗಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ರಾಜ್ಯ ಕಾರ್ಯಾಧ್ಯಕ್ಷೆ ಎಂದು ಹೇಳಿಕೊಂಡು ಈ ಮಹಿಳೆ ವಂಚಿಸಿದ್ದಾಳೆ ಎನ್ನಲಾಗಿದ್ದು, ಈ ಘಟನೆ (Fraud Case) ಬಳ್ಳಾರಿಯಲ್ಲಿ (Bellary) ನಡೆದಿದೆ. ಲೋನ್ ಕೊಡಿಸುವುದಾಗಿ ಕೂಡ ಹೇಳಿಕೊಂಡು ವಂಚಿಸಿದ್ದಾಳೆ ಎನ್ನಲಾಗಿದೆ.
ಉಡುಪಿಯ ತಬುಸುಮ್ ತಾಜ್ (40) ಈ ರೀತಿ ವಂಚಿಸಿರುವ ಮಹಿಳೆ. ಶ್ರೀಮಂತ ವ್ಯಕ್ತಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಈ ಮಹಿಳೆ ಎಂಟು ಮದುವೆಯಾಗಿ ವಂಚಿಸಿರುವ ಕುರಿತು ದಾಖಲೆಗಳು ಸಿಕ್ಕಿವೆ. ಆದರೆ, ದಾಖಲೆಗಳೂ ಇಲ್ಲದೇ ಇನ್ನೂ ಹಲವು ಮದುವೆಯಾಗಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಹೀನಾ ಎಂಟರ್ಪ್ರೈಸಸ್ ಎಂಬ ಆಫೀಸ್ ಇಟ್ಟುಕೊಂಡು ಅಮಾಯಕರನ್ನು ವಂಚಿಸುವ ಕಾಯಕ ಮಾಡಿಕೊಂಡಿದ್ದಳು ಎನ್ನಲಾಗಿದೆ. 18 ವರ್ಷದಿಂದ ಇದನ್ನೇ ಬ್ಯುಸಿನೆಸ್ ಮಾಡಿಕೊಂಡಿದ್ದಳು. ಯು.ಟಿ. ಖಾದರ್ ಬಳಿ ಬ್ಲ್ಯಾಕ್ ಮನಿ ಇದೆ. ಅದನ್ನು ವೈಟ್ ಮಾಡಲು ಈ ಬ್ಯುಸಿನೆಸ್ ಮಾಡುತ್ತಿದ್ದೇವೆ ಎಂದು ಜನರನ್ನು ನಂಬಿಸಿ, ಮೋಸಗೊಳಿಸಿದ್ದಾಳೆ ಎನ್ನಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಜನರನ್ನು ಈ ಮಹಿಳೆ ವಂಚಿಸಿದ್ದಾರೆ ಎನ್ನಲಾಗಿದೆ. ಒಂದು ಅಂದಾಜಿನಂತೆ ಈ ಮಹಿಳೆ ಸುಮಾರು 40 ಕೋಟಿಯಷ್ಟು ವಂಚಿಸಿದ್ದಾಳೆ ಎನ್ನಲಾಗಿದೆ. ಯಾರಾದರೂ ಕೊಟ್ಟ ದುಡ್ಡು ಕೇಳಿದರೆ, ಹೆದರಿಸುತ್ತಿದ್ದಳು ಎನ್ನಲಾಗಿದೆ. ಈಗ ಮಹಿಳೆಯ 6ನೇ ಗಂಡ ಈ ಕುರಿತು ಮಾಹಿತಿ ಬಹಿರಂಗ ಮಾಡಿದ್ದಾರೆ. ಸದ್ಯ ಮಹಿಳೆಯ ಮೇಲೆ ರಾಜ್ಯದ ಬೇರೆ ಬೇರೆ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ ಎನ್ನಲಾಗಿದೆ.