ಅಹಮದಾಬಾದ್ : ಕ್ರಿಕೆಟ್ ಜಗತ್ತಿನಲ್ಲಿ ಫೀಲ್ಡಿಂಗ್ ಎಂದಾಕ್ಷಣ ತಟ್ಟನೆ ನೆನಪಾಗುವ ಹೆಸರು ದಕ್ಷಿಣ ಆಫ್ರಿಕಾದ ದಂತಕಥೆ ಜಾಂಟಿ ರೋಡ್ಸ್. ಅವರ ಹೆಸರಿನಲ್ಲಿದ್ದ 32 ವರ್ಷಗಳ ಹಳೆಯ ವಿಶ್ವದಾಖಲೆಯೊಂದನ್ನು ಭಾರತದ ಯುವ ಆಟಗಾರನೊಬ್ಬ ತನ್ನ ಚೊಚ್ಚಲ ಪಂದ್ಯದಲ್ಲೇ ಮುರಿದು ಇತಿಹಾಸ ಸೃಷ್ಟಿಸಿದ್ದಾನೆ.
ಕೇರಳದ 24 ವರ್ಷದ ಸ್ಪಿನ್ನರ್ ವಿಘ್ನೇಶ್ ಪುತ್ತೂರು ಈ ಐತಿಹಾಸಿಕ ಸಾಧನೆ ಮಾಡಿದ ಕನ್ನಡಿಗ (ಕೇರಳದ ಮಲಪ್ಪುರಂ ಮೂಲದವರು). ವಿಜಯ್ ಹಜಾರೆ ಟ್ರೋಫಿಯ ಎಲೈಟ್ ಗ್ರೂಪ್ ‘ಎ’ ಪಂದ್ಯದಲ್ಲಿ ಕೇರಳ ಪರ ಕಣಕ್ಕಿಳಿದ ವಿಘ್ನೇಶ್, ತ್ರಿಪುರಾ ವಿರುದ್ಧದ ಪಂದ್ಯದಲ್ಲಿ ಬರೋಬ್ಬರಿ 6 ಕ್ಯಾಚ್‌ಗಳನ್ನು ಹಿಡಿಯುವ ಮೂಲಕ ಲಿಸ್ಟ್ ಎ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ.
ಜಾಂಟಿ ರೋಡ್ಸ್ ದಾಖಲೆ ಪತನ :
ಲಿಸ್ಟ್ ‘ಎ’ (ಒಂದು ದಿನದ) ಪಂದ್ಯವೊಂದರಲ್ಲಿ ವಿಕೆಟ್ ಕೀಪರ್ ಅಲ್ಲದ ಫೀಲ್ಡರ್ ಒಬ್ಬ ಅತಿ ಹೆಚ್ಚು ಕ್ಯಾಚ್‌ಗಳನ್ನು ಹಿಡಿದ ದಾಖಲೆ ಇಷ್ಟು ದಿನ ಜಾಂಟಿ ರೋಡ್ಸ್ ಹೆಸರಿನಲ್ಲಿತ್ತು. 1993ರ ನವೆಂಬರ್ 14ರಂದು ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ ರೋಡ್ಸ್ 5 ಕ್ಯಾಚ್‌ಗಳನ್ನು ಹಿಡಿದು ದಾಖಲೆ ಬರೆದಿದ್ದರು. ಬಳಿಕ ಬ್ರಾಡ್ ಯಂಗ್, ಪೀಟರ್ ಹ್ಯಾಂಡ್ಸ್‌ಕಾಂಬ್, ಏರಿಯನ್ ಸಂಗ್ಮಾ ಮತ್ತು ಹ್ಯಾರಿ ಬ್ರೂಕ್ ಕೂಡ ತಲಾ 5 ಕ್ಯಾಚ್ ಹಿಡಿದು ಈ ದಾಖಲೆಯನ್ನು ಸರಿಗಟ್ಟಿದ್ದರು. ಆದರೆ, ಯಾರೂ ಮುರಿಯಲು ಸಾಧ್ಯವಾಗಿರಲಿಲ್ಲ. ಇದೀಗ ತಮ್ಮ ಚೊಚ್ಚಲ ಪಂದ್ಯದಲ್ಲೇ 6 ಕ್ಯಾಚ್ ಹಿಡಿಯುವ ಮೂಲಕ ವಿಘ್ನೇಶ್ ಪುತ್ತೂರು ಏಕೈಕ ‘ಫೀಲ್ಡಿಂಗ್ ಕಿಂಗ್’ ಆಗಿ ಹೊರಹೊಮ್ಮಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಪಾಲು :
ಮಲಪ್ಪುರಂ ಮೂಲದ ವಿಘ್ನೇಶ್ ಪುತ್ತೂರು ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿಯಲಿದ್ದಾರೆ. ಡಿಸೆಂಬರ್ 16ರಂದು ನಡೆದ ಐಪಿಎಲ್ 2026 ಹರಾಜಿನಲ್ಲಿ ರಾಯಲ್ಸ್ ಫ್ರಾಂಚೈಸಿ ಇವರನ್ನು 30 ಲಕ್ಷ ರೂ. ನೀಡಿ ಖರೀದಿಸಿದೆ. ಕಳೆದ ಆವೃತ್ತಿಯಲ್ಲಿ ಇವರು ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದರು.
ದಾಖಲೆಯ 22 ಶತಕಗಳ ಸುರಿಮಳೆ :
ವಿಜಯ್ ಹಜಾರೆ ಟ್ರೋಫಿಯ ಮೊದಲ ದಿನವಾದ ಬುಧವಾರ ಕೇವಲ ಫೀಲ್ಡಿಂಗ್ ದಾಖಲೆ ಮಾತ್ರವಲ್ಲ, ಬ್ಯಾಟಿಂಗ್‌ನಲ್ಲೂ ಹೊಸ ಮೈಲಿಗಲ್ಲು ಸ್ಥಾಪನೆಯಾಗಿದೆ. ಟೂರ್ನಿಯ ಇತಿಹಾಸದಲ್ಲೇ ಒಂದೇ ದಿನ ಗರಿಷ್ಠ 22 ಶತಕಗಳು ದಾಖಲಾಗಿವೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಇಶಾನ್ ಕಿಶನ್, ವೈಭವ್ ಸೂರ್ಯವಂಶಿ ಸೇರಿದಂತೆ ಒಟ್ಟು 22 ಆಟಗಾರರು ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಈ ಹಿಂದೆ 2021 ಮತ್ತು 2025ರಲ್ಲಿ ತಲಾ 19 ಶತಕಗಳು ದಾಖಲಾಗಿದ್ದೇ ಗರಿಷ್ಠವಾಗಿತ್ತು.
ಒಂದು ಲಿಸ್ಟ್ ಎ ಪಂದ್ಯದಲ್ಲಿ ಫೀಲ್ಡರ್ ಹಿಡಿದ ಅತಿ ಹೆಚ್ಚು ಕ್ಯಾಚ್‌ಗಳ ಪಟ್ಟಿ :
ವಿಘ್ನೇಶ್ ಪುತ್ತೂರು (ಭಾರತ) 6
ಜಾಂಟಿ ರೋಡ್ಸ್ (ದಕ್ಷಿಣ ಆಫ್ರಿಕಾ) 5
ಬ್ರಾಡ್ ಯಂಗ್ (ಆಸ್ಟ್ರೇಲಿಯಾ) 5
ಪೀಟರ್ ಹ್ಯಾಂಡ್ಸ್‌ಕಾಂಬ್ (ಆಸ್ಟ್ರೇಲಿಯಾ) 5
ಏರಿಯನ್ ಸಂಗ್ಮಾ (ಭಾರತ) 5
ಹ್ಯಾರಿ ಬ್ರೂಕ್ (ಇಂಗ್ಲೆಂಡ್) 5
ಇದನ್ನೂ ಓದಿ : ‘ಕ್ರಿಕೆಟ್ ದೇವರನ್ನು’ ಕಣ್ತುಂಬಿಕೊಂಡ ಆಂಧ್ರದ ಯುವ ಬೌಲರ್ | ಕೊಹ್ಲಿ ಭೇಟಿಯ ಅವಿಸ್ಮರಣೀಯ ಕ್ಷಣ ಹಂಚಿಕೊಂಡು ಭಾವುಕ!



















