ನವದೆಹಲಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರ “ಮತ ಕಳ್ಳತನ” ಆರೋಪಗಳನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಬಹಿರಂಗವಾಗಿ ಬೆಂಬಲಿಸಿದ್ದಾರೆ. ಇದರಿಂದಾಗಿ ಚುನಾವಣಾ ಪ್ರಕ್ರಿಯೆಯ ನಿಷ್ಪಕ್ಷಪಾತತೆ ಬಗ್ಗೆ ಕಳವಳಗಳು ಮತ್ತಷ್ಟು ಹೆಚ್ಚಾಗಿವೆ.
ಶಶಿ ತರೂರ್ ಅವರು ಟ್ವಿಟರ್ ಮೂಲಕ ಪೋಸ್ಟ್ ಮಾಡಿ, “ರಾಹುಲ್ ಗಾಂಧಿ ಅವರು ಎತ್ತಿರುವ ಪ್ರಶ್ನೆಗಳು ಗಂಭೀರ ಸಮಸ್ಯೆಗಳು ಮತ್ತು ಇವುಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯು ಎಷ್ಟೊಂದು ಮೌಲ್ಯಯುತವಾಗಿದೆಯೆಂದರೆ, ಅವಿಶ್ವಾಸ, ನಿರ್ಲಕ್ಷ್ಯ ಅಥವಾ ಉದ್ದೇಶಪೂರ್ವಕ ಬದಲಾವಣೆಗಳಿಂದ ಅದರ ವಿಶ್ವಾಸಾರ್ಹತೆ ಹಾಳಾಗಲು ನಾವು ಬಿಡಬಾರದು” ಎಂದು ಹೇಳಿದ್ದಾರೆ. ಈ ಕುರಿತು ಶೀಘ್ರವಾಗಿ ಕಾರ್ಯಪ್ರವೃತ್ತರಾಗುವಂತೆ ಮತ್ತು ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ಅವರು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.
ರಾಹುಲ್ ಗಾಂಧಿಯವರ ಆರೋಪಗಳೇನು?
2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಚುನಾವಣಾ ಆಯೋಗವು ಕೈಜೋಡಿಸಿದ್ದು, “ದೊಡ್ಡ ಅಪರಾಧ” ನಡೆದಿದೆ ಎಂದು ಆರೋಪಿಸಿದ್ದಾರೆ. ಅವರು ಕರ್ನಾಟಕದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿನ ಮಹದೇವಪುರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅಕ್ರಮಗಳು ನಡೆದಿವೆ ಎಂದು ಹೇಳಿ ದಾಖಲೆಗಳು ಹಾಗೂ ಅಂಕಿಅಂಶಗಳನ್ನು ಪ್ರಸ್ತುತಪಡಿಸಿದ್ದರು. ಒಂದು ಲಕ್ಷಕ್ಕೂ ಹೆಚ್ಚು ಮತಗಳ “ಕಳ್ಳತನ” ನಡೆದಿದೆ ಎನ್ನುವುದು ಅವರ ಆರೋಪ.
ಚುನಾವಣಾ ಆಯೋಗದ ಪ್ರತಿಕ್ರಿಯೆ
ರಾಹುಲ್ ಗಾಂಧಿಯವರ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗ, ಈ ಅಕ್ರಮಗಳ ಕುರಿತು ಪ್ರತಿಜ್ಞಾವಿಧಿ ಸಹಿತ ನಿರ್ದಿಷ್ಟ ಮಾಹಿತಿ, ಅಂದರೆ ಅನರ್ಹ ಮತದಾರರ ಹೆಸರು ಮತ್ತು ಇತರೆ ದಾಖಲೆಗಳನ್ನು ಒದಗಿಸುವಂತೆ ಕೇಳಿದೆ. ಹಾಗೆಯೇ, ಸುಳ್ಳು ಮಾಹಿತಿ ನೀಡಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದೂ ಆಯೋಗ ಎಚ್ಚರಿಕೆ ನೀಡಿದೆ.
ರಾಹುಲ್ ಗಾಂಧಿಯವರ ಆರೋಪಗಳನ್ನು ಬಿಜೆಪಿ ರಾಜಕೀಯ ಪ್ರೇರಿತ ಮತ್ತು ಆಧಾರರಹಿತ ಎಂದು ತಳ್ಳಿಹಾಕಿದೆ. ಜೊತೆಗೆ, ಅವರು ಈ ಬಗ್ಗೆ ಯಾವುದೇ ಔಪಚಾರಿಕ ದೂರುಗಳನ್ನು ಸಲ್ಲಿಸಿಲ್ಲ ಎಂದು ಟೀಕಿಸಿದೆ. ಇನ್ನೊಂದೆಡೆ, ಸಿಪಿಐ ರಾಹುಲ್ ಆರೋಪಕ್ಕೆ ಬೆಂಬಲ ಸೂಚಿಸಿದ್ದು, ಚುನಾವಣಾ ಆಯೋಗದ ವಿರುದ್ಧದ ಆರೋಪಗಳ ಪರಿಶೀಲನೆ ಆಗಬೇಕು ಎಂದು ಆಗ್ರಹಿಸಿದೆ.