ಶರಾವತಿ ನದಿಗೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಲಿಂಗನಮಕ್ಕಿಯಲ್ಲಿ ಅಣೆಕಟ್ಟು ನಿರ್ಮಾಣ ಮಾಡಲಾಗಿದೆ. ಈಗಾಗಲೇ ಅಲ್ಲಿ ನಾಲ್ಕು ವಿದ್ಯುತ್ ಗಾರದಿಂದ 1469.02 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.
ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ರಾಜ್ಯ ಸರ್ಕಾರ ತನ್ನ KPTCL ಸಂಯಕ್ತ ಸಂಸ್ಥೆಗಳು ಮೂಲಕ ಶರಾವತಿ ಅಂತರ್ಗತ ಜಲವಿದ್ಯುತ್ ಯೋಜನೆ ನಿರ್ಮಿಸಲು ಸಿದ್ಧತೆ ನಡೆಸಿದೆ. ನಾಡಿಗೆ ಜೀವಧಾರೆಯನ್ನೇ ಎರೆಯುತ್ತಿರುವ ಶರಾವತಿ ನದಿಯಿಂದ ಇನ್ನಷ್ಟು ವಿದ್ಯುತ್ ಉತ್ಪಾದನೆ ಮಾಡುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದೆ. ರಾಜ್ಯ ಸರ್ಕಾರದ ಈ ಯೋಜನೆಯಿಂದ ಶರಾವತಿ ನದಿಯ ಕತ್ತು ಹಿಸುಕಿದಂತಾಗುತ್ತದೆ ಎನ್ನುವುದು ಪರಿಸರವಾದಿಗಳ ವಾದವಾಗಿದೆ.
ರಾಜ್ಯ ಸರ್ಕಾರವು ಶರಾವತಿ ನದಿಯ ನೀರನ್ನು ಇನ್ನಷ್ಟು ಮೇಲಕ್ಕೆ ಎತ್ತಿಕೊಂಡು ಹೋಗಿ ಅಲ್ಲಿನಿಂದ ಪುನಃ ಮತ್ತೆ ನೀರನ್ನು ಕೆಳಕ್ಕೆ ಬಿಟ್ಟು ಜಲ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಗೆ ಈಗಾಗಲೇ ಕೈ ಹಾಕಿದೆ. ಇದೇ ಹಿನ್ನೆಲೆಯಲ್ಲಿ ಕಳೆದ ಬಜೆಟ್ ನಲ್ಲಿ ರಾಜ್ಯ ಸರ್ಕಾರ 10 ಸಾವಿರ ಕೋಟಿ ರೂಪಾಯಿಯನ್ನು ಯೋಜನೆಗೆ ಮೀಸಲಿಟ್ಟು ಘೋಷಣೆ ಮಾಡಿ ಆದೇಶವನ್ನು ಹೊರಡಿಸಿದೆ.
ಗೇರುಸೊಪ್ಪ ಅಣೆಕಟ್ಟಿನಲ್ಲಿ ಸಂಗ್ರಹ ಆಗುವ ನೀರನ್ನು ನೇರವಾಗಿ ಮತ್ತೆ ಗುರುತ್ವಾರ್ಷಣೆಗೆ ವಿರುದ್ಧವಾಗಿ ತಲಕಳಲೆ ಅಣೆಕಟ್ಟಿಗೆ ತಂದು ಸುಂರಗ ಮಾರ್ಗದ ಮೂಲಕ ಹರಿಸಿದ ನೀರನ್ನು 2 ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಬೃಹತ್ ವಿದ್ಯುತ್ ಉತ್ಪಾದನೆ ಮಾಡುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಕೇಂದ್ರ ವಿದ್ಯುತ್ ಪ್ರಾಧಿಕಾರ 2024ನೇ ಆಗಸ್ಟ್ 1ರಂದು ಯೋಜನೆಯ ಡಿಪಿಆರ್ ಅನ್ನು ಅನುಮೋದಿಸಿದೆ. ಹೀಗಿದ್ದರೂ ಫೆಬ್ರವರಿ ಕಡೇ ವಾರದಲ್ಲಿ ಹೈದರಾಬಾದ್ ಮೂಲದ ಮೇಘಾ ಎಂಜಿನಿಯರಿಂಗ್ ಮತ್ತು ಇಸ್ಫಾಸ್ಟ್ರಕ್ಚರ್ಸ್ ಸಂಸ್ಥೆಗೆ 8,005 ಕೋಟಿ ರೂ. ಮೊತ್ತಕ್ಕೆ ಟೆಂಡರ್ ನೀಡಲಾಗಿದೆ. ರಾಜ್ಯ ಸರ್ಕಾರದ ಈ ನಡೆಯನ್ನು ಖಂಡಿಸಿ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ಅಷ್ಟಲ್ಲದೇ, ಅರಣ್ಯ ಮತ್ತು ಪರಿಸರ ಸಚಿವಾಲಯದಿಂದ ಪರಿಸರ ವಿಮೋಚನಾ ಪತ್ರ ಪಡೆಯಬೇಕಾಗಿದೆ. ಈ ಸಂಬಂಧವಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಇದೇ ಸೆಪ್ಟೆಂಬರ್ 16 ಮತ್ತು 18ರಂದು ಪರಿಸರ ಸಾರ್ವಜನಿಕ ಸಭೆ ಕರೆದಿದೆ. ಸಭೆ ರದ್ದುಗೊಳಿಸುವಂತೆ ಸಾರ್ವಜನಿಕರು ಕಿಡಿ ಕಾರಿದ್ದಾರೆ.
ಇನ್ನು, ಡಿಪಿಆರ್ ಒದಗಿಸುವಂತೆ ಸಂತ್ರಸ್ತರು ಮತ್ತು ಪರಿಸರವಾದಿಗಳು ಒಂದು ವರ್ಷದಿಂದ 50ಕ್ಕೂ ಹೆಚ್ಚು ಬಾರಿ ಆರ್‌ಟಿಐನಲ್ಲಿ ಅರ್ಜಿ ಸಲ್ಲಿಸಿದರೂ ರಾಜ್ಯ ಸರಕಾರ ತಿರಸ್ಕರಿಸುತ್ತಲೇ ಬಂದಿದೆ. ಡಿಪಿಆರ್ ಅಧ್ಯಯನ ನಡೆಸದೆ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಚರ್ಚೆ ಪೂರ್ಣವಾಗುವುದಿಲ್ಲ. ಇದರ ಬಗ್ಗೆ ಪರಿಸರವಾದಿ ಹೋರಾಟಗಾರರು, ಧರ್ಮಗುರುಗಳು ಸರ್ಕಾರಕ್ಕೆ ಪತ್ರ ಬರೆದು ಪರಿಸರ ಸಾರ್ವಜನಿಕ ಸಭೆಯನ್ನು ರದ್ದುಗೊಳಿಸಬೇಕು. ಡಿಪಿಆರ್ ಬಹಿರಂಗಪಡಿಸಿದ ಬಳಿಕ ಅಧ್ಯಯನಕ್ಕೆ 6 ತಿಂಗಳ ಸಮಯಾವಕಾಶ ನೀಡಿ, ಅನಂತರದಲ್ಲಿ ಸಭೆ ನಡೆಸಬೇಕು ಎಂದು ಈಗಾಗಲೇ ಆಗ್ರಹಿಸಿದ್ದಾರೆ.
ಹೌದು, ರಾಜ್ಯ ಸರ್ಕಾರ ಮಲೆನಾಡಿನ ಪಶ್ಚಿಮ ಘಟ್ಟಗಳ ಪ್ರದೇಶದ ಅರಣ್ಯ ಸಂಪತ್ತನ್ನು ಕಿತ್ತು ತಿನ್ನುವಂತಹ ಕೆಲಸವನ್ನು ಮಾಡುತ್ತಲೇ ಬಂದಿದೆ. ಇದೇ ಹಿನ್ನೆಲೆಯಲ್ಲಿ ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣವಾದ ಸಂದರ್ಭದಲ್ಲಿ ಅನೇಕ ಅರಣ್ಯ ಸಂಪತ್ತು ನಾಶವಾಗಿದೆ. ಅದರ ಜೊತೆಯಲ್ಲಿ ಜನವಸತಿ ಅತಂತ್ರವಾಗಿದ್ದು ಕೂಡ ಇದೆ. ಈ ರೀತಿ ಅತಂತ್ರವಾಗಿ ಬದುಕು ಕಟ್ಟಿಕೊಂಡ ಜನರು ಇಂದಿಗೂ ಮೂಲ ಸೌಕರ್ಯಗಳಿಗಾಗಿ ಪರಿತಪಿಸುತ್ತಿದ್ದಾರೆ. ಇದರ ಬಗ್ಗೆ ಗಮನವಹಿಸಬೇಕಾದ ರಾಜ್ಯ ಸರ್ಕಾರ ಮಾತ್ರ, ಆ ಜನರ ಮೇಲೆ ಅರಣ್ಯ ಕಾನೂನುಗಳನ್ನು ಹೇರಿ ಅಲ್ಲಲ್ಲಿ ಒಕ್ಕಲಿಬ್ಬಿಸುವ ಹುನ್ನಾರವನ್ನೂ ಅವ್ಯಾಹತವಾಗಿ ನಡೆಸುತ್ತಿದೆ.
ಏನೇ ಆಗಲಿ ರಾಜ್ಯ ಸರ್ಕಾರ ಮಾತ್ರ ಮಲೆನಾಡಿನ ಅರಣ್ಯ ಸಂಪತ್ತಿನ ಮೇಲೆ ಅದರಲ್ಲೂ ಬಹಳ ಪ್ರಮುಖವಾಗಿ ಕರ್ನಾಟದ ಅಸ್ಮಿತೆ ಆದ ಪಶ್ಚಿಮ ಘಟ್ಟಕ್ಕೆ ಸೀಮಿತವಾದ 730 ಸಿಂಗಳೀಕಗಳ ನಿರ್ನಾಮ ಮಾಡಲು ಹೊರಟಂತೆ ಸ್ಪಷ್ಟವಾಗಿ ಕಾಣಿಸುತ್ತಿದೆ. ಇದರ ಸಾಧಕ ಬಾಧಕಗಳ ಬಗ್ಗೆ ಜನರಿಗೆ ಚಿಂತನೆ ನಡೆಸಲು ಬಿಡದೆ, ಪಶ್ಚಿಮ ಘಟ್ಟಗಳಲ್ಲಿ ವಾಸವಾಗಿರುವ ಅದೆಷ್ಟೋ ಸುಂದರ ಪರಿಸರ ಮತ್ತು ಜೀವಸಂಕುಲಗಳ ವ್ಯವಸ್ಥೆಯನ್ನು ಹಾಳು ಮಾಡಲು ಹೊರಟಿರುವುದು ಎಷ್ಟರಮಟ್ಟಿಗೆ ಸರಿ ಎನ್ನುವಂತದ್ದು ಪರಿಸರ ಪ್ರೇಮಿಗಳ ಪ್ರಶ್ನೆಯಾಗಿದೆ.
1980ರ ದಶಕದ ಪಶ್ಚಿಮ ಘಟ್ಟ ಉಳಿಸಿ ಹೋರಾಟದ ಮಾದರಿಯ ಹೋರಾಟದ ಮಾದರಿಯನ್ನು ಮತ್ತೊಮ್ಮೆ ಸರ್ಕಾರಕ್ಕೆ ತೋರಿಸುವ ಸಮಯ ಬಂದಿದೆ. ನಿಮ್ಮ ದುರಾಸೆಗೆ ನಮ್ಮ ಜೀವ ಜಲ ಶರಾವತಿಯನ್ನು ಬಲಿ ಕೊಡಲು ಬಿಡುವ ಪಶ್ನೆಯೇ ಇಲ್ಲ ಎನ್ನುವುದು ಪರಿಸರವಾದಿಗಳು ಹಾಗೂ ಸ್ಥಲೀಯರ ವಾದವಾಗಿದೆ. ಶರಾವತಿ ಪಂಪ್ ಸ್ಟೋರೇಜ್ ಜಲವಿದ್ಯುತ್ ಯೋಜನೆಯನ್ನು ಸರ್ಕಾರ ಕೈ ಬಿಡಲೇ ಬೇಕು ಎಂದು ಸಾಮಾಜಿಕ ಹೋರಾಟಗಾರರು ಪರಿಸರವಾದಿಗಳು ಸ್ಥಳೀಯರು ತಮ್ಮ ಸಂಘಟನೆ ಮೂಲಕ ಹೋರಾಟಕ್ಕಿಳಿಯಲು ಮುಂದಾಗಿದ್ದಾರೆ.
-ಕರ್ನಾಟಕ ನ್ಯೂಸ್ ಬೀಟ್