ಕೊಡಗು: ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್ ತೆರಳಿದ್ದ ಕೇರಳ ಮೂಲದ ಯುವತಿ ಶರಣ್ಯ ನಾಲ್ಕು ದಿನಗಳ ನಂತರ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ದಟ್ಟ ಅರಣ್ಯದಲ್ಲಿ ದಾರಿ ತಪ್ಪಿ ನಾಪತ್ತೆಯಾಗಿದ್ದ ಅವರನ್ನು ಎಎನ್‌ಎಫ್, ಪೊಲೀಸ್ ಹಾಗೂ ಅರಣ್ಯ ಇಲಾಖೆ ಸೇರಿ ಸ್ಥಳೀಯರ ಸಹಾಯದಿಂದ ನಡೆಸಿದ ಬೃಹತ್ ಶೋಧ ಕಾರ್ಯಾಚರಣೆಯಲ್ಲಿ ಸುರಕ್ಷಿತವಾಗಿ ಪತ್ತೆ ಹಚ್ಚಲಾಗಿದೆ.
ಶರಣ್ಯ ಏಪ್ರಿಲ್ 2 ರಂದು ಟ್ರೆಕ್ಕಿಂಗ್ ವೇಳೆ ತಂಡದಿಂದ ಬೇರ್ಪಟ್ಟು ಕಾಡಿನಲ್ಲಿ ಕಳೆದುಹೋಗಿದ್ದರು. ದಟ್ಟ ಮಂಜು ಮತ್ತು ಮಳೆಯ ನಡುವೆಯೂ ಎಎನ್‌ಎಫ್, ಅರಣ್ಯ ಇಲಾಖೆ, ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯ ಸ್ವಯಂಸೇವಕರು ಹಗಲಿರುಳು ಹುಡುಕಾಟ ನಡೆಸಿದರು. ಡ್ರೋನ್, ಥರ್ಮಲ್ ಡ್ರೋನ್ ಮತ್ತು ಶ್ವಾನ ದಳದ ಸಹಾಯದಿಂದ ಶೋಧ ಕಾರ್ಯ ಮುಂದುವರಿದಿತ್ತು.
ಕೊನೆಗೆ ಅರಣ್ಯದ ಹಾದಿಗಳ ಬಗ್ಗೆ ತಿಳುವಳಿಕೆ ಹೊಂದಿರುವ ಸ್ಥಳೀಯ ಕುಡಿಯ ಜನಾಂಗದ ಯುವಕರು ಕಾಡಿನ ಆಳ ಭಾಗದಲ್ಲಿ ಶೋಧ ನಡೆಸುವಾಗ ಶರಣ್ಯ ಪತ್ತೆಯಾಗಿದ್ದಾರೆ. ಆರೋಗ್ಯವಾಗಿದ್ದ ಅವರನ್ನು ಸುರಕ್ಷಿತವಾಗಿ ಕಾಡಿನಿಂದ ಹೊರತೆಗೆದುಕೊಳ್ಳಲಾಗಿದೆ.
ರಕ್ಷಣೆಗೊಂಡ ನಂತರ ಮಾತನಾಡಿದ ಶರಣ್ಯ, “ನಾನು ದಾರಿ ತಪ್ಪಿದಾಗ ಸ್ನೇಹಿತರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ ಫೋನ್ ಸ್ವಿಚ್ ಆಫ್ ಆಗಿತ್ತು. ನನ್ನ ಬಳಿ ಒಂದು ಬಾಟಲಿ ನೀರು ಮಾತ್ರ ಇತ್ತು. ಡ್ರೋಣ್ ಮೂಲಕ ಹುಡುಕಬಹುದು ಎಂದು ತಿಳಿದಿದ್ದರಿಂದ ಬಯಲು ಪ್ರದೇಶದಲ್ಲೇ ನಿಂತಿದ್ದೆ,” ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಅವರ ಸಮಯಪ್ರಜ್ಞೆ ಅವರ ಜೀವ ಉಳಿಸಿದ ಪ್ರಮುಖ ಕಾರಣವೆಂದು ಹೇಳಲಾಗಿದೆ.
ಈ ಕಾರ್ಯಾಚರಣೆಗೆ ಅರಣ್ಯ ಸಚಿವಈಶ್ವರ್ ಖಂಡ್ರೆ ಪ್ರಶಂಸೆ ವ್ಯಕ್ತಪಡಿಸಿ, ಶೋಧ ಕಾರ್ಯದಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೆ ಧನ್ಯವಾದ ತಿಳಿಸಿದ್ದಾರೆ. ಕೊಚ್ಚಿಯ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶರಣ್ಯ, ತಂಡದೊಂದಿಗೆ ಟ್ರೆಕ್ಕಿಂಗ್ ವೇಳೆ ಹಿಂದೆ ಉಳಿದು ದಾರಿ ತಪ್ಪಿದ್ದ ಘಟನೆ ಈಗ ಯಶಸ್ವಿ ರಕ್ಷಣೆಯೊಂದಿಗೆ ಅಂತ್ಯ ಕಂಡಿದೆ.


















