ಬೆಂಗಳೂರು: ಸ್ವಾತಂತ್ರ್ಯ ಪೂರ್ವದಲ್ಲಿ ನಡೆಯುವ ಸಾಧ್ವಿ ಹೆಣ್ಣುಮಗಳು ಶರಾವತಿಯ ಕಥೆಯನ್ನು ನಿರ್ದೇಶಕ ಕೂಡ್ಲು ರಾಮಕೃಷ್ಣ “ಶಾನುಭೋಗರ ಮಗಳು” ಚಿತ್ರದ ಮೂಲಕ ತೆರೆಗೆ ಬಂದಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ.
ಭುವನ್ ಫಿಲಂಸ್ ಲಾಂಛನದಲ್ಲಿ ಸಿ.ಎಂ.ನಾರಾಯಣ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ನಟಿ ರಾಗಿಣಿ ಪ್ರಜ್ವಲ್, ಕಿಶೋರ್, ನಿರಂಜನ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರ ಕಳೆದವಾರ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇತ್ತೀಚೆಗೆ ನಡೆದ ವಿಶೇಷ ಪ್ರದರ್ಶನದಲ್ಲಿ ಭಾಗವಹಿಸಿದ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
ಚಿತ್ರ ನೋಡಿದ ಎಲ್ಲರೂ ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ ಎಂದೇ ಹೇಳುತ್ತಿದ್ದಾರೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಬರುತ್ತಿಲ್ಲ ಎಂದು ನಿರ್ದೇಶಕ ಕೂಡ್ಲು ರಾಮಕೃಷ್ಣ ಹೇಳಿದರು. ಲೇಖಕಿ ಭಾಗ್ಯಕೃಷ್ಣಮೂರ್ತಿ ಕೂಡ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಹೆಣ್ಣನ್ನು ಕೇಂದ್ರವಾಗಿಟ್ಟುಕೊಂಡು ಬರುತ್ತಿರುವ ಚಿತ್ರಗಳು ಕಡಿಮೆಯಾಗುತ್ತಿರುವ ಈ ಸಮಯದಲ್ಲಿ ಮಹಿಳಾ ಪ್ರಧಾನ ಚಿತ್ರವೊಂದು ಬಂದಿದೆ. ಚಿತ್ರದಲ್ಲಿ ಇತಿಹಾಸ, ಕಾಲ್ಪನಿಕ ಇತಿಹಾಸ ಹಾಗೂ ಸಮಾಜದಲ್ಲಿ ನಡೆಯುತ್ತಿರುವ ಕೆಲವು ವಿಷಯಗಳನ್ನು ತೋರಿಸಲಾಗಿದೆ. ಚಿತ್ರ ಚೆನ್ನಾಗಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ನಟ ಕಿಶೋರ್ ಹೇಳಿದ್ದಾರೆ.
ನಾಯಕಿ ರಾಗಿಣಿ ಪ್ರಜ್ವಲ್ ಮಾತನಾಡಿ, ಈ ವಾರ 11 ಸಿನಿಮಾ ಬಿಡುಗಡೆಯಾಗಿವೆ. ಅದರ ನಡುವೆ ನಮ್ಮ ಚಿತ್ರವನ್ನು ಜನ ಇಷ್ಟಪಟ್ಟಿದ್ದಾರೆ. ಎಲ್ಲಾ ವರ್ಗದ ಜನರಿಗೂ ನಮ್ಮ ಸಿನಿಮಾ ಕನೆಕ್ಟ್ ಆಗುತ್ತೆ ಎಂದು ಹೇಳಿದ್ದಾರೆ.