ಬೆಂಗಳೂರು: ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟರಾದ ಕರಾಟೆ ಕಿಂಗ್ ಶಂಕರ್ ನಾಗ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ವಿಶೇಷ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ದಿನ “ಮೈಲಾಪುರ” ಚಿತ್ರತಂಡ ಬಿಡುಗಡೆ ಮಾಡಿದೆ. ಜನಪ್ರಿಯ ಶಾಸಕ ಪ್ರಿಯಕೃಷ್ಣ ಈ ವಿಶೇಷ ಪೋಸ್ಟರ್ ಅನಾವರಣ ಮಾಡಿದ್ದಾರೆ. ಪೋಸ್ಟರ್ ಬಿಡುಗಡೆ ಮಾಡಿದ ಪ್ರಿಯಕೃಷ್ಣ ಇದೇ ಮಾಸಂತ್ಯಕ್ಕೆ ಬಿಡುಗಡೆಯಾಗಲಿರುವ “ಮೈಲಾಪುರ” ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ. ಇತ್ತೀಚೆಗೆ ನಡೆದ ಮಹಾ ಕುಂಭಮೇಳದ ಸಂದರ್ಭದಲ್ಲಿ ಈ ಚಿತ್ರದ ನಿರ್ಮಾಪಕರಲ್ಲೊಬ್ಬರಾದ ವಿ.ಅಂತರಿಕ್ಷ್ ನಿಧನಾರಾದರು. ಈ ಚಿತ್ರದ ಪೋಸ್ಟರ್ ಬಿಡುಗಡೆ ಸಂದರ್ಭದಲ್ಲಿ ಶಾಸಕ ಪ್ರಿಯಕೃಷ್ಣ ಅವರು ಅಂತರಿಕ್ಷ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರು. ಎಲ್ಲರ ಕಷ್ಟಕ್ಕೆ ಸ್ಪಂದಿಸುವ ಗುಣವಿರುವ ಶಾಸಕ ಪ್ರಿಯಕೃಷ್ಣ ಅವರಿಗೆ ಚಿತ್ರ ತಂಡದ ಸದಸ್ಯರು ಧನ್ಯವಾದ ತಿಳಿಸಿದರು.

ಶುಭ ವಾಸುಕಿ, ಅಂತರಿಕ್ಷ ವಿ, ಅನಂತ ಪದ್ಮನಾಭ ಹಾಗೂ ವಾಸುಕಿ ಆಚಾರ್ಯ ನಿರ್ಮಿಸಿರುವ, ಫಣಿ ರಾಮ್ ನಿರ್ದೇಶನದ ಈ ಚಿತ್ರದ ಮೂಲಕ ಭರತ್ ಕುಮಾರ್ ಎಂಬ ಯುವನಟ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ನಿಧಿ ಸುಬ್ಬಯ್ಯ, ಕಿಶೋರ್, ಮನದೀಪ ರಾಯ್, ಐಶ್ವರ್ಯ ಸಿಂದೋಗಿ, ಕಿಶನ್ ಬೆಳಿಗಲಿ, ಅಂತರಿಕ್ಷ, ಶುಭ ವಾಸುಕಿ ಮುಂತಾದವರು ತಾರಾ ಬಳಗದಲ್ಲಿದ್ದಾರೆ. ಆನಂದ್ ಇಳಯರಾಜ ಛಾಯಾಗ್ರಹಣ, ವೇದ್ ಸಂಕಲನ ಹಾಗೂ ಸೂರಜ್ ಜೋಯಿಸ್ ಸಂಗೀತ ನಿರ್ದೇಶನ “ಮೈಲಾಪುರ” ಚಿತ್ರಕ್ಕಿದೆ.



















