ಮಹಾರಾಷ್ಟ್ರ : ಮಹಾರಾಷ್ಟ್ರ ಕರಾವಳಿ ಭಾಗಕ್ಕೆ ಶಕ್ತಿ ಚಂಡಮಾರುತ ಅಪ್ಪಳಿಸಲಿದ್ದು, ಹಲವು ಜಿಲ್ಲೆಗಳಲ್ಲಿ ಭಾರೀ ಗಾಳಿ ಮತ್ತು ಮಳೆ ಬೀಸುವ ಸಾಧ್ಯತೆಗಳಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ‘ಶಕ್ತಿ’ ಚಂಡಮಾರುತದ ಪರಿಣಾಮ ಕರ್ನಾಟಕದಲ್ಲಿಯೂ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಇಲಾಖೆ ಸೂಚನೆ ನೀಡಿದೆ.
ಅಕ್ಟೋಬರ್ 4 ಮತ್ತು 7ರ ನಡುವೆ ಬೃಹತ್ ಮತ್ತು ಮಧ್ಯಮ ಚಂಡಮಾರುತ ಬೀಸಲಿದ್ದು, ಮುಂಬೈ, ಥಾಣೆ, ಪಾಲ್ಘರ್, ರಾಯಗಡ್, ರತ್ನಗಿರಿ ಹಾಗೂ ಸಿಂಧುದುರ್ಗ ಜಿಲ್ಲೆಯಲ್ಲಿ ಮಳೆ ಅಬ್ಬರ ಜೋರಾಗಲಿದೆ. ಮಹಾರಾಷ್ಟ್ರದ ಕರಾವಳಿ ಭಾಗದಲ್ಲಿ ಗಾಳಿಯ ವೇಗವು ಗಂಟೆಗೆ 45-55 ಕಿ.ಮೀ.ನಿಂದ 65 ಕಿ.ಮೀ.ವರೆಗೆ ಬೀಸಲಿದೆ ಎಂದು ಇಲಾಖೆ ತಿಳಿಸಿದೆ.
ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದ್ದು, ಮಹಾರಾಷ್ಟ್ರದ ಪೂರ್ವ ಪ್ರದೇಶಗಳಾದ ವಿದರ್ಭ ಮತ್ತು ಮರಾಠವಾಡದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಹೇಳಿದೆ. ಇನ್ನು ಜಿಲ್ಲಾಡಳಿತಗಳು ತಮ್ಮ ವಿಪತ್ತು ನಿರ್ವಹಣಾ ತಂಡಗಳನ್ನು ಸಕ್ರಿಯಗೊಳಿಸಬೇಕು. ಕರಾವಳಿ ಮತ್ತು ತಗ್ಗು ಪ್ರದೇಶಗಳಲ್ಲಿ ಜನರ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು, ಸಮುದ್ರ ಪ್ರಯಾಣ ನಡೆಸದಂತೆ ಸೂಚಿಸಬೇಕು ಎಂದು ಸರ್ಕಾರ ಮತ್ತು ಜಿಲ್ಲಾಡಳಿತಗಳಿಗೆ ಇಲಾಖೆ ಸೂಚಿಸಿದೆ.