ಬೆಂಗಳೂರು : ಪಾಕ್ ಕ್ರಿಕೆಟಿಗರು ಎಂದರೆ ವಿವಾದವೇ ಅವರ ದೇವರು. ಯಾವಾಗ ನೋಡಿದರೂ ಆಟಕ್ಕಿಂತ ಹೆಚ್ಚು ವಿವಾದವೇ ಹೆಚ್ಚು. ಪಾಕಿಸ್ತಾನ ಸೂಪರ್ ಲೀಗ್ (PSL) 2026ರ ಆವೃತ್ತಿಯಲ್ಲಿ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ದೊಡ್ಡ ವಿವಾದವೊಂದು ಭುಗಿಲೆದ್ದಿದೆ. ಲಾಹೋರ್ ಕಲಂದರ್ಸ್ ತಂಡದ ನಾಯಕ ಶಾಹೀನ್ ಶಾ ಅಫ್ರಿದಿ ಮತ್ತು ಅನುಭವಿ ಆಟಗಾರ ಸಿಕಂದರ್ ರಾಜಾ ಅವರು ಕಟ್ಟುನಿಟ್ಟಿನ ಭದ್ರತಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಇಬ್ಬರೂ ಆಟಗಾರರು ಅಧಿಕೃತ ಅನುಮತಿ ಇಲ್ಲದ ನಾಲ್ವರು ಸಂದರ್ಶಕರನ್ನು ಬಲವಂತವಾಗಿ ಹೋಟೆಲ್ ರೂಮ್‌ಗೆ ಕರೆದೊಯ್ದಿದ್ದಾರೆ ಎಂದು ಪಂಜಾಬ್ ಪೊಲೀಸರು ವರದಿ ಮಾಡಿದ್ದಾರೆ.
ಅಧಿಕೃತ ಅನುಮತಿ ನಿರಾಕರಿಸಿದರೂ ನಿಯಮ ಉಲ್ಲಂಘನೆ
ವರದಿಗಳ ಪ್ರಕಾರ, ಶನಿವಾರ ರಾತ್ರಿ ಸಿಕಂದರ್ ರಾಜಾ ಅವರಿಗೆ ಪರಿಚಿತರಾಗಿದ್ದ ನಾಲ್ವರು ವ್ಯಕ್ತಿಗಳು ತಂಡ ತಂಗಿದ್ದ ಹೋಟೆಲ್‌ಗೆ ಆಗಮಿಸಿದ್ದರು. ಈ ಸಂದರ್ಶಕರಿಗೆ ಆಟಗಾರರ ಕೊಠಡಿಗೆ ಹೋಗಲು ಅನುಮತಿ ನೀಡುವಂತೆ ಲಾಹೋರ್ ಕಲಂದರ್ಸ್ ತಂಡದ ಲೈಜನ್ ಆಫೀಸರ್ ಮತ್ತು ತಂಡದ ಮಾಲೀಕ ಸಮೀನ್ ರಾಣಾ ಅವರು ಪಿಎಸ್‌ಎಲ್ ಸಿಇಒ ಸಲ್ಮಾನ್ ನಸೀರ್ ಅವರಿಗೆ ಮನವಿ ಮಾಡಿದ್ದರು. ಆದರೆ, ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಈ ಮನವಿಯನ್ನು ಸಿಇಒ ಕಡಾಖಂಡಿತವಾಗಿ ತಿರಸ್ಕರಿಸಿದ್ದರು. ಹೀಗಿದ್ದರೂ ಸಹ, ಶಾಹೀನ್ ಅಫ್ರಿದಿ ಮತ್ತು ಸಿಕಂದರ್ ರಾಜಾ ಅವರು ಭದ್ರತಾ ಸಿಬ್ಬಂದಿಯ ತಡೆಯನ್ನು ಲೆಕ್ಕಿಸದೆ, ಆ ನಾಲ್ವರು ವ್ಯಕ್ತಿಗಳನ್ನು ಬಲವಂತವಾಗಿ ತಮ್ಮ ಕೊಠಡಿಗೆ ಕರೆದೊಯ್ದಿದ್ದಾರೆ ಎಂದು ಪೊಲೀಸ್ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸ್ ಇಲಾಖೆಯ ಗಂಭೀರ ಆಕ್ಷೇಪ ಮತ್ತು ತನಿಖೆ
ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಪಂಜಾಬ್ ಪೊಲೀಸರು, ಪಿಎಸ್‌ಎಲ್ ಸಿಇಒ ಅವರಿಗೆ ಪತ್ರ ಬರೆದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೋಟೆಲ್‌ನಲ್ಲಿ ನಿಯೋಜನೆಗೊಂಡಿದ್ದ ಭದ್ರತಾ ಸಿಬ್ಬಂದಿಯ ಸೂಚನೆಗಳನ್ನು ಆಟಗಾರರು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ್ದಾರೆ ಮತ್ತು ಸುಮಾರು ಮೂರು ಗಂಟೆಗಳ ಕಾಲ ಅಪರಿಚಿತ ವ್ಯಕ್ತಿಗಳು ಆಟಗಾರರ ಕೊಠಡಿಯಲ್ಲಿದ್ದರು ಎಂದು ಪೊಲೀಸರು ದೂರಿದ್ದಾರೆ.
ಇದು ಕೇವಲ ಶಿಸ್ತಿನ ಉಲ್ಲಂಘನೆಯಲ್ಲದೆ, ಅಂತಾರಾಷ್ಟ್ರೀಯ ಮಟ್ಟದ ಟೂರ್ನಿಯಲ್ಲಿ ಆಟಗಾರರ ಸುರಕ್ಷತೆಗೆ ಒದಗಿದ ದೊಡ್ಡ ಭದ್ರತಾ ಲೋಪವಾಗಿದೆ ಎಂದು ಪೊಲೀಸ್ ಇಲಾಖೆ ಎಚ್ಚರಿಸಿದೆ. ಲಾಹೋರ್ ಕಲಂದರ್ಸ್ ತಂಡದ ಮ್ಯಾನೇಜ್‌ಮೆಂಟ್ ಈ ಬಗ್ಗೆ ಪಿಎಸ್‌ಎಲ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದ್ದು, ತಪ್ಪು ಸಾಬೀತಾದಲ್ಲಿ ಆಟಗಾರರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ : ಒಣಗಿದ ದಾಸವಾಳ ಹೂವು ನುಂಗಿ ಉಸಿರು ಚೆಲ್ಲಿದ 6 ತಿಂಗಳ ಕಂದಮ್ಮ!



















