ನವದೆಹಲಿ: ‘ಜವಾನ್’ ಚಿತ್ರದ ಅತ್ಯುತ್ತಮ ನಟನೆಗಾಗಿ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರು ತಮ್ಮ 33 ವರ್ಷಗಳ ವೃತ್ತಿಜೀವನದಲ್ಲಿ ಚೊಚ್ಚಲ ರಾಷ್ಟ್ರೀಯ ಪ್ರಶಸ್ತಿಯನ್ನು ಇತ್ತೀಚೆಗೆ ಮುಡಿಗೇರಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಾರುಖ್‌ಗೆ ಕೇರಳದ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಟ್ವೀಟರ್‌ನಲ್ಲಿ ಅಭಿನಂದನೆ ಸಲ್ಲಿಸಿದ್ದು, ಅದಕ್ಕೆ ಶಾರುಖ್ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಹಾಗೂ ತರೂರ್ ಮಾದರಿಯಲ್ಲೇ ನೀಡಿರುವ ಹಾಸ್ಯಮಯ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಶಾರುಖ್ ಖಾನ್ ಅವರಿಗೆ ‘ಜವಾನ್’ ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಘೋಷಣೆಯಾದ ನಂತರ, ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಮತ್ತು ಗಣ್ಯರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.
ಶಶಿ ತರೂರ್ ಮತ್ತು ಶಾರುಖ್ ಖಾನ್ ನಡುವಿನ ಸಂಭಾಷಣೆ
ತಮ್ಮ ಇಂಗ್ಲಿಷ್ ಭಾಷಾ ಪಾಂಡಿತ್ಯಕ್ಕೆ ಹೆಸರುವಾಸಿಯಾಗಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಎಕ್ಸ್ (ಹಿಂದಿನ ಟ್ವಿಟರ್) ಮೂಲಕ ಶಾರುಖ್ ಖಾನ್ ಅವರನ್ನು ಅಭಿನಂದಿಸಿ, “ಒಬ್ಬ ರಾಷ್ಟ್ರೀಯ ಸಂಪತ್ತು ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿದೆ! ಅಭಿನಂದನೆಗಳು @iamsrk!” ಎಂದು ಹೊಗಳಿದ್ದಾರೆ.

ಇದಕ್ಕೆ ತಮ್ಮ ಎಂದಿನ ಚತುರತೆ ಮತ್ತು ಹಾಸ್ಯ ಪ್ರಜ್ಞೆಯಿಂದ ಪ್ರತಿಕ್ರಿಯಿಸಿದ ಶಾರುಖ್ ಖಾನ್, “ನಿಮ್ಮ ಸರಳ ಹೊಗಳಿಕೆಗೆ ಧನ್ಯವಾದಗಳು ಮಿಸ್ಟರ್ ತರೂರ್. ಇದಕ್ಕಿಂತ ಹೆಚ್ಚು ಮ್ಯಾಗ್ನಿಲೋಕ್ವೆಂಟ್(magniloquent) ಮತ್ತು ಸೆಸ್‌ಕ್ವಿಪೆಡಾಲಿಯನ್ (sesquipedalian) ಬಳಸಿದ್ದರೆ ನನಗೆ ಅರ್ಥವಾಗುತ್ತಿರಲಿಲ್ಲ, ಹ ಹ್ಹ ಹ್ಹಾ,” ಎಂದು ಉತ್ತರಿಸಿದ್ದಾರೆ. ಇಲ್ಲಿ ‘magniloquent’ ಎಂದರೆ ‘ಆಡಂಬರದ ಭಾಷೆ’ ಮತ್ತು ‘sesquipedalian’ ಎಂದರೆ ‘ದೀರ್ಘ ಹಾಗೂ ಸಂಕೀರ್ಣ ಪದಗಳು’ ಎಂದರ್ಥ. ಈ ತಮಾಷೆಯ ಸಂಭಾಷಣೆ ಶಾರುಖ್ ಮತ್ತು ತರೂರ್ ಅವರ ಫಾಲೋವರ್ ಗಳಿಂದ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ
ಎಲ್ಲರಿಗೂ ಧನ್ಯವಾದ
ಶಾರುಖ್ ಕೇವಲ ಶಶಿ ತರೂರ್ ಅವರಿಗೆ ಮಾತ್ರವಲ್ಲದೆ, ತಮ್ಮನ್ನು ಅಭಿನಂದಿಸಿದ ಪ್ರತಿಯೊಬ್ಬರಿಗೂ ಪ್ರತಿಕ್ರಿಯಿಸಿದ್ದಾರೆ. ‘ಜವಾನ್’ ಅನ್ನು ತಮಗೆ ಬರೆದ ಮೊದಲ ಪ್ರೇಮಪತ್ರ ಎಂದು ಬಣ್ಣಿಸಿದ್ದ ನಿರ್ದೇಶಕ ಅಟ್ಲಿಗೆ, “MAAASSS MAAASSS MAASSS. ನಿಮ್ಮ ದೃಷ್ಟಿಕೋನಕ್ಕೆ ಧನ್ಯವಾದಗಳು. ಮುಂದಿನ ಹಾಡಿನಲ್ಲಿ ನಾವು ಇನ್ನೂ ಹೆಚ್ಚು ಸ್ಟೆಪ್ಸ್ ಹಾಕೋಣ. ಲವ್ ಯೂ,” ಎಂದು ಶಾರುಖ್ ಪ್ರತಿಕ್ರಿಯಿಸಿದ್ದಾರೆ.
ಇದೇ ರೀತಿ ಪತ್ನಿ ಗೌರಿ ಖಾನ್ ಅವರ ಶುಭ ಹಾರೈಕೆಗೂ ಪ್ರತಿಕ್ರಿಯಿಸಿರುವ ಅವರು, “ಇಂದು ರಾತ್ರಿ ಊಟ ಮಾಡುವಾಗ ದಯವಿಟ್ಟು ನನ್ನ ಬಗ್ಗೆ ನನಗೆ ಹೊಗಳಿ ಹೇಳು… ಚಿತ್ರವನ್ನು ನಿರ್ಮಿಸಿದ್ದಕ್ಕಾಗಿ ಧನ್ಯವಾದಗಳು,” ಎಂದು ತಮಾಷೆಯಾಗಿ ಕೇಳಿಕೊಂಡಿದ್ದಾರೆ.
ಇದಲ್ಲದೆ, ಶಾರುಖ್ ಖಾನ್ ಅವರು ಒಂದು ಹೃದಯಸ್ಪರ್ಶಿ ವಿಡಿಯೋ ಸಂದೇಶವನ್ನು ಹಂಚಿಕೊಂಡು, ತಮ್ಮ ವೃತ್ತಿ ಜೀವನದುದ್ದಕ್ಕೂ ಬೆಂಬಲ ನೀಡಿದ ಅಭಿಮಾನಿಗಳು ಮತ್ತು ಸಹೋದ್ಯೋಗಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಸದ್ಯಕ್ಕೆ ಶಾರುಖ್ ಖಾನ್ ಅವರು ತಮ್ಮ ಮುಂಬರುವ ‘ಕಿಂಗ್’ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಇತ್ತೀಚೆಗೆ ಆಕ್ಷನ್ ದೃಶ್ಯವೊಂದರ ಚಿತ್ರೀಕರಣದ ವೇಳೆ ಅವರ ಕೈಗೆ ಗಾಯವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಅವರ ಮಗಳು ಸುಹಾನಾ ಖಾನ್, ಅಭಿಷೇಕ್ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ಕೂಡ ನಟಿಸುತ್ತಿದ್ದಾರೆ.