ಬೆಂಗಳೂರು : ತೆಲಂಗಾಣದ ರೀತಿ ಕರ್ನಾಟಕದಲ್ಲಿರುವ ಲೈಂಗಿಕ ಅಲ್ಪಸಂಖ್ಯಾತರನ್ನು ಸಂಚಾರ ನಿಯಂತ್ರಣ ವ್ಯವಸ್ಥೆಯಲ್ಲಿ ನೇಮಕ ಮಾಡಿಕೊಳ್ಳಬೇಕೆಂದು ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್ ಅವರಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಪತ್ರದಲ್ಲೇನಿದೆ?
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಲೈಂಗಿಕ ಅಲ್ಪಸಂಖ್ಯಾತ ಹಲವು ಮಹಿಳೆಯರು ಇದ್ದು, ತಮ್ಮ ದಿನನಿತ್ಯದ ಜೀವನ ನಿರ್ವಹಣೆ ನಡೆಸಲು ಬಹಳ ಕಷ್ಟಪಡುತ್ತಿರುವುದು ಆಯೋಗದ ಗಮನಕ್ಕೆ ಬಂದಿರುತ್ತದೆ. ಇಂತಹ ಲೈಂಗಿಕ ಅಲ್ಪಸಂಖ್ಯಾತ ಮಹಿಳೆಯರನ್ನು ರಾಜ್ಯಾದಾದ್ಯಂತ ಸಂಚಾರ ನಿಯಂತ್ರಣ ವ್ಯವಸ್ಥೆಯಲ್ಲಿ ನೇಮಕ ಮಾಡಿಕೊಂಡಲ್ಲಿ ಲೈಂಗಿಕ ಅಲ್ಪಸಂಖ್ಯಾತ ಮಹಿಳೆಯರು ಸಮಾಜದ ಮುಖ್ಯ ವಾಹಿನಿಯಲ್ಲಿ ಗೌರವಯುತವಾಗಿ ಜೀವನ ನಿರ್ವಹಿಸಲು ಸಹಕಾರಿಯಾಗುತ್ತದೆ ಹಾಗೂ ಇವರಿಗೆ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಯೂ ದೊರೆತಂತಾಗುತ್ತದೆ.

ಇತ್ತೀಚೆಗೆ ತೆಲಂಗಾಣ ರಾಜ್ಯದಲ್ಲಿ ಲೈಂಗಿಕ ಅಲ್ಪಸಂಖ್ಯಾತ ಮಹಿಳೆಯರನ್ನು ಸಂಚಾರ ನಿಯಂತ್ರಣ ವ್ಯವಸ್ಥೆಯಲ್ಲಿ ನೇಮಕ ಮಾಡಿಕೊಂಡಿದ್ದು, ಇಂತಹ ಕ್ರಮದಿಂದ ಅಲ್ಲಿನ ಲೈಂಗಿಕ ಅಲ್ಪಸಂಖ್ಯಾತ ಮಹಿಳೆಯರು ಪ್ರಯೋಜನ ಪಡೆದುಕೊಂಡು ಗೌರವಯುತವಾಗಿ ಜೀವನ ನಿರ್ವಹಿಸುವುದು ಗಮನಾರ್ಹ ಅಂಶವಾಗಿದೆ.

ಹಾಗೆಯೇ ನಮ್ಮ ರಾಜ್ಯದಲ್ಲಿರುವ ಲೈಂಗಿಕ ಅಲ್ಪಸಂಖ್ಯಾತ ಮಹಿಳೆಯರನ್ನು ಸಂಚಾರ ನಿಯಂತ್ರಣ ವ್ಯವಸ್ಥೆಯಲ್ಲಿ ನೇಮಕ ಮಾಡಿಕೊಂಡಲ್ಲಿ ಅವರಿಗೂ ಗೌರವಯುತವಾದ ಬದುಕು ದೊರೆಯುವಲ್ಲಿ ಸಹಕಾರಿಯಾಗುತ್ತದೆ. ಹಾಗಾಗಿ ಲೈಂಗಿಕ ಅಲ್ಪಸಂಖ್ಯಾತ ಮಹಿಳೆಯರನ್ನು ಸಂಚಾರ ನಿಯಂತ್ರಣ ವ್ಯವಸ್ಥೆಯಲ್ಲಿ ನೇಮಕ ಮಾಡಿಕೊಳ್ಳುವಂತೆ ಸಂಬಂಧಪಟ್ಟ ಇಲಾಖೆ/ ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಸಿಎಂ ಹಾಗೂ ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ದರ್ಶನ್ ಅಭಿನಯದ ‘ಡೆವಿಲ್’ ಚಿತ್ರಕ್ಕೆ ವಿಶ್ ಮಾಡಿದ ರಿಷಬ್ ಶೆಟ್ಟಿ!



















