ಚಿತ್ರರಂಗದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ವಿಷಯವಾಗಿ ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಸಮಿತಿಯ ವರದಿಯ ನಂತರ ಸಾಕಷ್ಟು ವಿವಾದಗಳು ಎದ್ದಿವೆ. ಈ ಬೆನ್ನಲ್ಲೇ ಕನ್ನಡ ಚಿತ್ರರಂಗದಲ್ಲಿ ಕೂಡ ಈ ರೀತಿಯ ಲೈಂಗಿಕ ದೌರ್ಜನ್ಯ ಗುರುತಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಲು ಸಮಿತಿ ರಚಿಸಬೇಕೆಂಬ ಕೂಗು ಕೇಳಿ ಬರುತ್ತಿವೆ.
ನಟ ಚೇತನ್ ಅಹಿಂಸಾ ಹಾಗೂ ಇನ್ನಿತರ ಕೆಲವು ನಟ -ನಟಿಯರು ಗುರುವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅಲ್ಲದೇ, ಸಮಿತಿ ರಚಿಸಬೇಕೆಂದು ಮನವಿ ಮಾಡಿದ್ದಾರೆ. ಸುಮಾರು 150 ಜನರು ಸಹಿ ಮಾಡಿರುವ ಮನವಿ ಪತ್ರವನ್ನೂ ಸಿಎಂಗೆ ನೀಡಿದ್ದಾರೆ.
ಆದರೆ, ಈ ಕುರಿತು ಫಿಲಂ ಚೇಂಬರ್ ಆಫ್ ಕಾಮರ್ಸ್ ಕೂಡ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಹ ಈ ವಿಷಯವಾಗಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದೆ. ಮಹಿಳಾ ಆಯೋಗದಿಂದ, ಫಿಲಂ ಚೇಂಬರ್ ಗೆ ಪತ್ರ ಬಂದಿರುವ ಕಾರಣ ಸಭೆಯನ್ನು ಕರೆಯಲು ಫಿಲಂ ಚೇಂಬರ್ ನಿರ್ಧರಿಸಿದೆ.
ಚಿತ್ರರಂಗದ ನಟಿಯರನ್ನು ಆಹ್ವಾನಿಸಿ ಅವರ ಸಮ್ಮುಖದಲ್ಲಿ ಸಭೆ ನಡೆಸಿ, ಸಮಿತಿ ರಚಿಸಲು ಒತ್ತಾಯಿಸುವಂತೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಚೇಂಬರ್ ತಿಳಿಸಿದೆ. ಸಭೆಯನ್ನು ಸೆಪ್ಟೆಂಬರ್ 13ರ ಒಳಗೆ ನಡೆಸುವಂತೆ ಮಹಿಳಾ ಆಯೋಗ ಸೂಚಿಸಿರುವ ಕಾರಣದಿಂದಾಗಿ ಇಂದು ಫಿಲಂ ಚೇಂಬರ್ ಪದಾಧಿಕಾರಿಗಳು ಸಭೆ ಕರೆದಿದ್ದು ಆಂತರಿಕ ಸಭೆ ನಡೆಸಲಿದ್ದಾರೆ. ನಂತರ ಕೆಲವೇ ದಿನಗಳಲ್ಲಿ ನಟಿಯರನ್ನು ಕರೆದು ಸಭೆ ನಡೆಸಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ.
ಗುರುವಾರ ಈ ವಿಷಯವಾಗಿ ಮಾತನಾಡಿದ ಚೇಂಬರ್ ಅಧ್ಯಕ್ಷ ಎನ್ಎಂ ಸುರೇಶ್, ದೌರ್ಜನ್ಯದ ಕುರಿತು ನಮಗೆ ಯಾವುದೇ ದೂರು ಬಂದಿಲ್ಲ. ದೂರು ಬಂದರೆ ನಾವು ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದ್ದಾರೆ.