ದಾವಣಗೆರೆ: 30ಕ್ಕೂ ಅಧಿಕ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿದೆ.
ಈ ಕೃತ್ಯ ಜಿಲ್ಲೆಯ ಚನ್ನಗಿರಿ (Channagiri) ಪಟ್ಟಣದಲ್ಲಿ ಬೆಳಕಿಗೆ ಬಂದಿತ್ತು. ಔಷಧಿ ಅಂಗಡಿ ಮಾಲೀಕನೊಬ್ಬನ ವಿರುದ್ಧ ಈ ಆರೋಪ ಕೇಳಿ ಬಂದಿತ್ತು. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಪೊಲೀಸರು (Police) ಆರೋಪಿಯನ್ನು ಬಂಧಿಸಿದ್ದರು. ಈಗ ಇದು ದೊಡ್ಡ ಆಕ್ರೋಶಕ್ಕೆ ಕಾರಣವಾಗಿದ್ದು, ಆತನಿಗೆ ಗಲ್ಲು ಶಿಕ್ಷೆ ವಿಧಿಸಬೇಕೆದು ಇಂದು ಚನ್ನಗಿರಿ ಪಟ್ಟಣ ಬಂದ್‌ಗೆ ವಿಎಚ್ ಪಿ, ಭಜರಂಗದಳ, ಶ್ರೀರಾಮ ಸೇನೆ, ಸೇರಿದಂತೆ ಹಿಂದೂ ಪರ ಸಂಘಟನೆಗಳು ಕರೆ ನೀಡಿವೆ.
ಅಮ್ಜದ್ ಆರೋಪಿತ. ಕೆಲ ಯುವಕರು ಈತನಿಗೆ ಸಹಕಾರ ನೀಡಿದ್ದು ಅವರನ್ನೂ ಬಂಧಿಸಬೇಕೆಂದು ಆಗ್ರಹಿಸಲಾಗುತ್ತಿದೆ. ಈತ ಹಿಂದೂ ಹೆಣ್ಣು ಮಕ್ಕಳನ್ನು ಟಾರ್ಗೆಟ್ ಮಾಡಿ ಕೃತ್ಯ ಎಸಗುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಔಷಧ ಅಂಗಡಿ ನಡೆಸುತ್ತಿದ್ದ ಅಮ್ಜದ್, ಅಪ್ರಾಪ್ತೆಯರು, ಯುವತಿಯರು, ಮಹಿಳೆಯರನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡು, ಅಶ್ಲೀಲ ವಿಡಿಯೋ ಮಾಡಿಕೊಳ್ಳುತ್ತಿದ್ದ. ಈತನಿಗೆ ಸಂಬಂಧಿಸಿದ ಮೊಬೈಲ್, ಕಂಪ್ಯೂಟರ್ ಸುಮಾರು 60ಕ್ಕೂ ಅಧಿಕ ಇಂತಹ ದೃಶ್ಯಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.
ಸ್ನಾನ ಮಾಡುವ ಅಪ್ರಾಪ್ತೆಯರು, ಯುವತಿಯರು, ಗೃಹಿಣಿಯರ ವಿಡಿಯೋ ಮಾಡುವುದು, ಔಷಧಿ ಅಂಗಡಿಗೆ ಬಂದ ಮಹಿಳೆಯರು, ಯುವತಿಯರು, ಅಪ್ರಾಪ್ತೆಯರ ವಿಡಿಯೋಗಳನ್ನು ಮಾಡಿಕೊಂಡು, ವಿಕೃತ ಖುಷಿ ಅನುಭವಿಸುತ್ತಿದ್ದ ಎನ್ನಲಾಗಿದೆ. ಆದರೆ, ಎಲ್ಲರ ಮುಂದೆ ಒಳ್ಳೆಯವನಂತೆ ನಾಟಕವಾಡುತ್ತಿದ್ದ. ಇತ್ತೀಚೆಗೆ ಇತನ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ ಅಮ್ಜದ್‌ನ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಆತನನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.