ನವದೆಹಲಿ: ತಂತ್ರಜ್ಞಾನದಲ್ಲಿನ ಅಮೆರಿಕದ ಪ್ರಾಬಲ್ಯವನ್ನು ಮಟ್ಟಹಾಕಲು ಚೀನಾ ಮತ್ತು ರಷ್ಯಾವು ರಹಸ್ಯವಾಗಿ ನಡೆಸುತ್ತಿರುವ ಕಾರ್ಯಾಚರಣೆಯು ಇತ್ತೀಚೆಗೆ ಬೆಳಕಿಗೆ ಬಂದಿದೆ. ಇಂಥ ಬೇಹುಗಾರಿಕಾ ಕಾರ್ಯಾಚರಣೆಯ ಹೆಸರು ‘ಸೆಕ್ಸ್ ವಾರ್‌ಫೇರ್’!
ಅಮೆರಿಕದ ಒಬ್ಬ ಟೆಕ್ಕಿ ಯಾವುದೋ ಸಮಾವೇಶವೊಂದರಲ್ಲಿ ಆಕೆಯನ್ನು ಭೇಟಿಯಾಗುತ್ತಾನೆ. ಆಕೆ ಬುದ್ಧಿವಂತೆ, ನೋಡಲು ಆಕರ್ಷಕವಾಗಿರುತ್ತಾಳೆ. ಒಂದೇ ನೋಟದಲ್ಲಿ ಆತನನ್ನು ಸೆಳೆಯುತ್ತಾಳೆ. ತನ್ನ ಮಾತಿನ ಶೈಲಿ, ಹಾವಭಾವಗಳಿಗೆ ಆಕರ್ಷಿಸುತ್ತಾಳೆ, ಆತ ಮಾಡುತ್ತಿರುವ ಕೆಲಸದಲ್ಲಿ ತನಗೆ ನಿಜವಾಗಿಯೂ ಆಸಕ್ತಿ ಇದೆ ಎಂಬಂತೆ ವರ್ತಿಸುತ್ತಾಳೆ. ಇಬ್ಬರೂ ಪರಸ್ಪರ ಹತ್ತಿರವಾಗುತ್ತಾರೆ. ಆದರೆ, ವರ್ಷಗಳ ನಂತರ ಆಕೆಯ ಸತ್ಯ ಅವನ ಅರಿವಿಗೆ ಬರುತ್ತದೆ. ಆಕೆ ಅಮೆರಿಕದ ತಂತ್ರಜ್ಞಾನ ಕ್ಷೇತ್ರದ ರಹಸ್ಯಗಳನ್ನು ಕದಿಯಲು ರೂಪಿಸಲಾದ ಒಂದು ವ್ಯವಸ್ಥಿತ ಗುಪ್ತಚರ ಕಾರ್ಯಾಚರಣೆಯ ಭಾಗವಾಗಿರುತ್ತಾಳೆ. ಇದು ಇಂದು ಸಿಲಿಕಾನ್ ವ್ಯಾಲಿ(ಅಮೆರಿಕ)ದ ಟೆಕ್ ಕ್ಷೇತ್ರದಲ್ಲಿ ನಡೆಯುತ್ತಿರುವ ಗೂಢಚರ್ಯೆಯ ಕರಾಳ ವಾಸ್ತವ.
ಚೀನಾ ಮತ್ತು ರಷ್ಯಾದ ಗೂಢಚಾರರು ಆಕರ್ಷಕ ಮಹಿಳೆಯರನ್ನು ಬಳಸಿಕೊಂಡು ಟೆಕ್ ಕಂಪನಿಗಳಿಗೆ ನುಸುಳುತ್ತಿರುವ, ಉದ್ಯೋಗಿಗಳನ್ನು ಮರುಳುಗೊಳಿಸಿ ವ್ಯಾಪಾರ ರಹಸ್ಯಗಳನ್ನು ಕದಿಯುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿವೆ. ಗುಪ್ತಚರ ತಜ್ಞರು ಇದನ್ನು “ಸೆಕ್ಸ್ ವಾರ್‌ಫೇರ್” ಎಂದು ಕರೆದಿದ್ದು, ಅಮೆರಿಕದ ತಾಂತ್ರಿಕ ಪ್ರಾಬಲ್ಯಕ್ಕೆ ಇದು ದೊಡ್ಡ ಬೆದರಿಕೆಯಾಗಿ ಪರಿಣಮಿಸಿದೆ. ಕೆಲವು ಸಂದರ್ಭಗಳಲ್ಲಿ, ದೀರ್ಘಕಾಲದವರೆಗೆ ಮಾಹಿತಿ ಪಡೆಯಲು ಈ ಗೂಢಚಾರರು ತಮ್ಮ ಟಾರ್ಗೆಟ್‌ಗಳನ್ನು ಮದುವೆಯಾಗಿ ಮಕ್ಕಳನ್ನೂ ಪಡೆಯುತ್ತಾರೆ.
ಚೀನಾದಲ್ಲಿ ಹೂಡಿಕೆ ಮಾಡುವ ಅಮೆರಿಕನ್ ಕಂಪನಿಗಳಿಗೆ ಸಲಹೆ ನೀಡುವ ಪಮಿರ್ ಕನ್ಸಲ್ಟಿಂಗ್‌ನ ಮುಖ್ಯ ಗುಪ್ತಚರ ಅಧಿಕಾರಿ ಜೇಮ್ಸ್ ಮಲ್ವೆನಾನ್, “ಇತ್ತೀಚೆಗೆ ಒಂದೇ ಮಾದರಿಯ ಆಕರ್ಷಕ ಚೀನೀ ಯುವತಿಯರಿಂದ ನನಗೆ ಲಿಂಕ್ಡ್‌ಇನ್‌ನಲ್ಲಿ ಅತ್ಯಾಧುನಿಕ ಮನವಿಗಳು ಬರುತ್ತಿವೆ. ಇದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ” ಎಂದು ಹೇಳಿದ್ದಾರೆ.

ಗೂಢಚರ್ಯೆಯ ಹೊಸ ಮುಖ
ಲೈಂಗಿಕತೆಯನ್ನು ಆಧರಿಸಿದ ಗೂಢಚರ್ಯೆ ಕೇವಲ ಒಂದು ಭಾಗವಷ್ಟೇ. ತಜ್ಞರ ಪ್ರಕಾರ, ಚೀನಾವು ಅಮೆರಿಕದ ನೆಲದಲ್ಲೇ ಸ್ಟಾರ್ಟ್‌ಅಪ್ ಸ್ಪರ್ಧೆಗಳನ್ನು ಆಯೋಜಿಸಿ ವ್ಯಾಪಾರ ಯೋಜನೆಗಳನ್ನು ಕದಿಯುತ್ತಿದೆ. ರಷ್ಯಾ ಮತ್ತು ಚೀನಾ ಎರಡೂ ದೇಶಗಳು ಸಾಮಾನ್ಯ ನಾಗರಿಕರು, ಹೂಡಿಕೆದಾರರು, ಶಿಕ್ಷಣ ತಜ್ಞರು ಮತ್ತು ಕ್ರಿಪ್ಟೋ ವಿಶ್ಲೇಷಕರನ್ನು ಅನೌಪಚಾರಿಕ ಗುಪ್ತಚರ ಏಜೆಂಟ್‌ಗಳಾಗಿ ಬಳಸಿಕೊಳ್ಳುತ್ತಿವೆ.
ಮಾಜಿ ಗುಪ್ತಚರ ಅಧಿಕಾರಿಯೊಬ್ಬರು, ರಷ್ಯಾದ “ಸುಂದರ” ಮಹಿಳೆಯೊಬ್ಬಳು ಸೂಕ್ಷ್ಮ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದ ಅಮೆರಿಕದ ಏರೋಸ್ಪೇಸ್ ಎಂಜಿನಿಯರ್‌ನನ್ನು ಮದುವೆಯಾದ ಪ್ರಕರಣವನ್ನೂ ಇದಕ್ಕೆ ಉದಾಹರಣೆಯಾಗಿ ಉಲ್ಲೇಖಿಸಿದ್ದಾರೆ. “ಒಬ್ಬರನ್ನು ಗುರಿಯಾಗಿಸಿ, ಅವರನ್ನು ಮದುವೆಯಾಗಿ, ಮಕ್ಕಳನ್ನು ಪಡೆದು, ಜೀವನಪರ್ಯಂತ ಮಾಹಿತಿ ಸಂಗ್ರಹಿಸುವ ಕಾರ್ಯಾಚರಣೆ ಕೂಡ ನಡೆಯುತ್ತಿದ್ದು, ಇದು ಆತಂಕಕಾರಿ ವಿಷಯವಾದರೂ, ತುಂಬಾ ಪ್ರಚಲಿತದಲ್ಲಿದೆ” ಎಂದಿದ್ದಾರೆ.
ಬೌದ್ಧಿಕ ಆಸ್ತಿ ಕಳ್ಳತನದಿಂದ ಅಮೆರಿಕಕ್ಕೆ ವಾರ್ಷಿಕ 600 ಶತಕೋಟಿ ಡಾಲರ್ ನಷ್ಟವಾಗುತ್ತಿದ್ದು, ಇದರಲ್ಲಿ ಬಹುಪಾಲು ಚೀನಾದಿಂದಲೇ ಆಗುತ್ತಿದೆ.
ಗೂಢಚರ್ಯೆಯ ‘ವೈಲ್ಡ್ ವೆಸ್ಟ್’ ಸಿಲಿಕಾನ್ ವ್ಯಾಲಿ
ಸಿಲಿಕಾನ್ ವ್ಯಾಲಿಯು ಈಗ ತಂತ್ರಜ್ಞಾನ ಮತ್ತು ವ್ಯಾಪಾರ ರಹಸ್ಯಗಳನ್ನು ಗುರಿಯಾಗಿಸುವ “ಮೃದು” ಆರ್ಥಿಕ ಗೂಢಚರ್ಯೆಯ ಕೇಂದ್ರವಾಗಿದೆ. ಮಾಜಿ ಭದ್ರತಾ ವಿಶ್ಲೇಷಕ ಜೆಫ್ ಸ್ಟೋಫ್, “ಇದು ಅಲ್ಲಿ ಒಂದು ರೀತಿಯ ವೈಲ್ಡ್ ವೆಸ್ಟ್” ಎಂದು ಬಣ್ಣಿಸಿದ್ದಾರೆ. ಈ ಪ್ರದೇಶದ ಮುಕ್ತ ಸಂಸ್ಕೃತಿಯು ಗೂಢಚಾರರನ್ನು ಆಕರ್ಷಿಸುತ್ತಿದ್ದು, ದಕ್ಷಿಣ ಕೊರಿಯಾ ಮತ್ತು ಇಸ್ರೇಲ್‌ನಂತಹ ಮಿತ್ರರಾಷ್ಟ್ರಗಳು ಸಹ ಇಲ್ಲಿಂದ ಸದ್ದಿಲ್ಲದೆ ಗುಪ್ತಚರ ಮಾಹಿತಿ ಸಂಗ್ರಹಿಸುತ್ತಿವೆ.
ರಾಜಕೀಯ ಗೂಢಚರ್ಯೆ ಕೂಡ ಸಿಲಿಕಾನ್ ವ್ಯಾಲಿಯಲ್ಲಿ ಸಕ್ರಿಯವಾಗಿದೆ. ಕ್ಯಾಲಿಫೋರ್ನಿಯಾದಲ್ಲಿ ಚೀನಾದ ಗುಪ್ತಚರ ಘಟಕವೊಂದು ಸ್ಥಳೀಯ ನಾಯಕರು ಮತ್ತು ರಾಜಕಾರಣಿಗಳನ್ನು ನೇಮಿಸಿಕೊಳ್ಳುತ್ತಿದೆ. ರಷ್ಯಾದ ಗೂಢಚರ್ಯೆಯೂ ಸಹ ಶೀತಲ ಸಮರದ ಕಣ್ಗಾವಲಿನಿಂದ ವಿಕಸನಗೊಂಡು, ಈಗಲೂ ‘ಹನಿಪಾಟ್’ ತಂತ್ರಗಳನ್ನು ಬಳಸಿಕೊಂಡು ಟೆಕ್ ಸ್ಟಾರ್ಟ್‌ಅಪ್‌ಗಳಿಗೆ ನುಸುಳುತ್ತಿದೆ.
ಅಮೆರಿಕದ ಗುಪ್ತಚರ ಇಲಾಖೆಗಳಿಗೆ ಈ ಬೆದರಿಕೆಯನ್ನು ಎದುರಿಸಲು ಹಲವು ಅಡೆತಡೆಗಳಿವೆ. ಸ್ಟಾರ್ಟ್‌ಅಪ್‌ಗಳು ಸಾಮಾನ್ಯವಾಗಿ ಇಂತಹ ಬೆದರಿಕೆಗಳನ್ನು ವರದಿ ಮಾಡುವುದಿಲ್ಲ ಮತ್ತು ಅಲ್ಲಿನ ಮುಕ್ತ ಸಂಸ್ಕೃತಿಯು ನುಸುಳುವಿಕೆಯನ್ನು ಸುಲಭಗೊಳಿಸಿದೆ ಎಂದೂ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.