ಅಹಮದಾಬಾದ್: ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗುತ್ತಿರುವ ಟೀಮ್ ಇಂಡಿಯಾಗೆ ಆತಂಕದ ಸುದ್ದಿಯೊಂದು ಎದುರಾಗಿದೆ. ಅಕ್ಟೋಬರ್ 2 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್‌ಗೂ ಮುನ್ನ, ತಂಡದ ಪ್ರಮುಖ ಸ್ಪಿನ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರು ಅಭ್ಯಾಸದ ವೇಳೆ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಅಭ್ಯಾಸದ ವೇಳೆ ಬೆರಳಿಗೆ ಗಾಯ
ಅಭ್ಯಾಸದ ವೇಳೆ ಸುಂದರ್ ಅವರ ಬೌಲಿಂಗ್ ಕೈಯ ಬೆರಳಿಗೆ ಗಾಯವಾಗಿದ್ದು, ಇದರಿಂದಾಗಿ ಅವರು ಫೀಲ್ಡಿಂಗ್ ಡ್ರಿಲ್ಸ್‌ನಲ್ಲಿ ಭಾಗವಹಿಸಲಿಲ್ಲ. ಸುದ್ದಿ ಮಾಧ್ಯಮವೊಂದರ ವರದಿಯ ಪ್ರಕಾರ, ಸುಂದರ್ ಅವರು ದೀರ್ಘಕಾಲ ಬೌಲಿಂಗ್ ಮಾಡಿದ ನಂತರ, ಅಸ್ವಸ್ಥತೆ ಅನುಭವಿಸಿದ್ದಾರೆ. ನಂತರ ಅವರು ತಂಡದ ವೈದ್ಯಕೀಯ ಸಿಬ್ಬಂದಿಯಿಂದ ತಮ್ಮ ಕೈಗೆ ಹೆಚ್ಚುವರಿ ಟೇಪ್ ಹಾಕಿಸಿಕೊಂಡರು. ಈ ಸಂದರ್ಭದಲ್ಲಿ ನಾಯಕ ಶುಭಮನ್ ಗಿಲ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರು ಸುಂದರ್ ಅವರ ಬಳಿ ಗಾಯದ ಬಗ್ಗೆ ವಿಚಾರಿಸುತ್ತಿರುವುದು ಕಂಡುಬಂದಿದೆ.
ಆದಾಗ್ಯೂ, ಗಾಯದ ತೀವ್ರತೆಯ ಬಗ್ಗೆ ಬಿಸಿಸಿಐನಿಂದ ಯಾವುದೇ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಕೋಚ್ ಗೌತಮ್ ಗಂಭೀರ್ ಅವರ ನೆಚ್ಚಿನ ಆಟಗಾರರಲ್ಲಿ ಒಬ್ಬರಾದ ಸುಂದರ್, ಇತ್ತೀಚೆಗೆ ಅದ್ಭುತ ಫಾರ್ಮ್‌ನಲ್ಲಿದ್ದರು. ಒಂದು ವೇಳೆ ಗಾಯದ ಕಾರಣದಿಂದ ಅವರು ಮೊದಲ ಟೆಸ್ಟ್‌ನಿಂದ ಹೊರಗುಳಿದರೆ, ಶುಭಮನ್ ಗಿಲ್ ನೇತೃತ್ವದ ತಂಡಕ್ಕೆ ಇದು ದೊಡ್ಡ ಹಿನ್ನಡೆಯಾಗಲಿದೆ. ಅವರ ಅನುಪಸ್ಥಿತಿಯಲ್ಲಿ, ಅಕ್ಷರ್ ಪಟೇಲ್ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.
ಕೌಂಟಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ
ಇಂಗ್ಲೆಂಡ್ ಪ್ರವಾಸದ ನಂತರ, 2025ರ ಏಷ್ಯಾ ಕಪ್‌ನಲ್ಲಿ ಹೆಚ್ಚುವರಿ ಆಟಗಾರನಾಗಿದ್ದ ವಾಷಿಂಗ್ಟನ್ ಸುಂದರ್, ತವರಿನ ಸರಣಿಗೆ ಸಿದ್ಧತೆ ನಡೆಸಲು ಇಂಗ್ಲೆಂಡ್‌ನ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಹ್ಯಾಂಪ್‌ಶೈರ್ ತಂಡದ ಪರ ಆಡಿದ್ದರು. ಅಲ್ಲಿ ಆಡಿದ ಎರಡು ಪಂದ್ಯಗಳಲ್ಲಿ 4 ವಿಕೆಟ್ ಪಡೆದು, ಒಂದು ಅರ್ಧಶತಕ ಸೇರಿದಂತೆ 136 ರನ್ ಗಳಿಸಿ ಉತ್ತಮ ಫಾರ್ಮ್ ಪ್ರದರ್ಶಿಸಿದ್ದರು. ಹೀಗಾಗಿ, ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದ್ದ ಸುಂದರ್‌ಗೆ ಆಗಿರುವ ಗಾಯವು ತಂಡದ ಚಿಂತೆಗೆ ಕಾರಣವಾಗಿದೆ.



















