ಒಂದೇ ಪ್ರದೇಶದಲ್ಲಿ ಮಹಿಳೆಯರ ಸರಣಿ ಹತ್ಯೆಯಿಂದಾಗಿ ಜನರು ಕಳೆದ ಕೆಲವು ದಿನಗಳಿಂದ ಬೆಚ್ಚಿ ಬಿದ್ದಿದ್ದರು. ಸದ್ಯ ಈ ಪ್ರಕರಣ ಬೇಧಿಸಲು ಉತ್ತರ ಪ್ರದೇಶ ಪೊಲೀಸರು ಯಶಸ್ವಿಯಾಗಿದ್ದಾರೆ.
9 ಮಹಿಳೆಯರನ್ನು ಕೊಲೆ ಮಾಡಿದ್ದ ಸರಣಿ ಹಂತಕನನ್ನು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕಾಗಿ 22 ಪೊಲೀಸ್ ತಂಡಗಳು ಕಾರ್ಯ ನಿರ್ವಹಿಸಿವೆ. ಬರೋಬ್ಬರಿ 1.5 ಲಕ್ಷಕ್ಕೂ ಹೆಚ್ಚು ಮೊಬೈಲ್ ಸಂಖ್ಯೆಯನ್ನು ಟ್ರ್ಯಾಕ್ ಮಾಡಲಾಗಿತ್ತು. ಹಗಲು -ರಾತ್ರಿ ಪೊಲೀಸರು ಕಾರ್ಯನಿರ್ವಹಿಸಿ ಕೊಲೆ ಮಾಡಿರುವ ಆರೋಪಿಯನ್ನು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಜನರು ಸರಣಿ ಕೊಲೆಗಳಿಗೆ ಬೆಚ್ಚಿ ಬಿದ್ದಿದ್ದರು. 9 ಮಹಿಳೆಯರನ್ನು ಕತ್ತು ಹಿಸುಕಲು ಆತ ಸೀರೆಗಳನ್ನು ಬಳಸುತ್ತಿದ್ದ. ಆರೋಪಿಯನ್ನು 38 ವರ್ಷದ ಕುಲದೀಪ್ ಕುಮಾರ್ ಗಂಗ್ವಾರ್ ಎಂದು ಗುರುತಿಸಲಾಗಿದೆ. ಆರೋಪಿ ಮಹಿಳೆಯರನ್ನು ಕೊಲೆ ಮಾಡಿ, ಮಹಿಳೆಯರ ಲಿಪ್ ಸ್ಟಿಕ್ ಹಾಗೂ ಬಿಂದಿಗಳನ್ನು ತಾನು ಇಟ್ಟುಕೊಳ್ಳುತ್ತಿದ್ದ. ಬಾಲ್ಯದಲ್ಲಿ ಅನುಭವಿಸಿದ ತೊಂದರೆಯೇ ಆತನ ಈ ಕೃತ್ಯಗಳಿಗೆ ಕಾರಣ ಎನ್ನಲಾಗಿದೆ.
ತಾಯಿಯನ್ನು ಕಳೆದುಕೊಂಡಾಗ ತಂದೆ ಬೇರೆ ಮದುವೆಯಾಗಿದ್ದು, ಮಲತಾಯಿ ಆತನಿಗೆ ಕೊಡುತ್ತಿದ್ದ ಕಷ್ಟವನ್ನೆಲ್ಲಾ ನೋಡಿ ಆತ ಹೆಣ್ಣುಮಕ್ಕಳನ್ನು ದ್ವೇಷಿಸುತ್ತಿದ್ದ. ಹೀಗಾಗಿ ಆತ ಮಾನಸಿಕ ರೋಗಿಯಂತೆ ವರ್ತಿಸುತ್ತಿದ್ದ ಎನ್ನಲಾಗಿದೆ. ದುರ್ಬಲ ಮಹಿಳೆಯರ ಮೇಲೆ ಆತ ದಾಳಿ ಮಾಡುತ್ತಿದ್ದ. ಅಲ್ಲದೇ, ಏಕಾಂಗಿಯಾಗಿ ಕಂಡರೆ ಕೊಲೆ ಮಾಡುತ್ತಿದ್ದ. ಕಳೆದ 13 ತಿಂಗಳಲ್ಲಿ 11 ಒಂಟಿ ಮಹಿಳೆಯರ ಕೊಲೆಗಳು ನಡೆದಿದ್ದು, ಇದರಲ್ಲಿ 6 ಕೊಲೆಗಳನ್ನು ಮಾಡಿದ್ದೇನೆಂದು ಆತ ಒಪ್ಪಿಕೊಂಡಿದ್ದಾನೆ.