ನೆಲಮಂಗಲ : ಬೆಂಗಳೂರು ಉತ್ತರ ತಾಲೂಕಿನ ಮಾಕಳಿ ಸಮೀಪ ಭೀಕರ ಸರಣಿ ಅಪಘಾತ ಸಂಭವಿಸಿ, ಬೈಕ್ ಸವಾರನೊಬ್ಬ ಸ್ಥಳದಲ್ಲೇ ದುರ್ಮರಣ ಹೊಂದಿದ ಘಟನೆ ಬುಧವಾರ ನಸುಕಿನ ಜಾವ ನಡೆದಿದೆ. ಅಪಘಾತದಲ್ಲಿ ಮತ್ತೊಬ್ಬ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.
ಸೊಲ್ಲಾಪುರದಿಂದ ಈರುಳ್ಳಿ ತುಂಬಿಕೊಂಡು ಬರುತ್ತಿದ್ದ ಕ್ಯಾಂಟರ್ ಲಾರಿ, ಆಟೋ ಹಾಗೂ ಎರಡು ಬೈಕ್‌ಗಳ ನಡುವೆ ಅಪಘಾತ ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ರಸ್ತೆಯಲ್ಲಿ ಸಾಗುತ್ತಿದ್ದ ಆಟೋ ಸಡನ್ ಆಗಿ ಬ್ರೇಕ್ ಹಾಕಿದ್ದರಿಂದ ಹಿಂದೆ ಬರುತ್ತಿದ್ದ ಕ್ಯಾಂಟರ್ ಲಾರಿಗೆ ನಿಯಂತ್ರಣ ತಪ್ಪಿದೆ. ಪರಿಣಾಮವಾಗಿ ಲಾರಿ ಮೊದಲು ಆಟೋಗೆ ಡಿಕ್ಕಿ ಹೊಡೆದು, ಬಳಿಕ ಎದುರಿಗೆ ಬರುತ್ತಿದ್ದ ಬೈಕ್‌ಗಳ ಮೇಲೆ ಬಿದ್ದಿದೆ.
ಲಾರಿ ಬೈಕ್ ಮೇಲೆ ಉರುಳಿದ ಪರಿಣಾಮ ಒಬ್ಬ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮತ್ತೊಬ್ಬ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಆತನನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದ ದೃಶ್ಯ ಅತ್ಯಂತ ಭೀಕರವಾಗಿದ್ದು, ರಸ್ತೆ ಮೇಲೆ ಈರುಳ್ಳಿ ಚೀಲಗಳು ಚೆಲ್ಲಾಪಿಲ್ಲಿಯಾಗಿವೆ.
ಅಚ್ಚರಿಯ ಸಂಗತಿ ಎಂದರೆ, ಅಪಘಾತದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದರೂ ಸಹ, ರಸ್ತೆ ಮೇಲೆ ಬಿದ್ದಿದ್ದ ಈರುಳ್ಳಿಯನ್ನು ಹೊತ್ತುಕೊಂಡು ಹೋಗಲು ಜನರು ಮುಗಿಬಿದ್ದರು. ಜನರು ಈರುಳ್ಳಿಗಾಗಿ ಮುಗಿಬಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡಿದ್ದು, ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿವೆ. ಮಾನವೀಯತೆ ಮರೆತ ಈ ವರ್ತನೆ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಇದನ್ನೂ ಓದಿ : ಗೋಲ್ಡ್‌ನಂತೆಯೇ ಗಲ್ಫ್ ದೇಶಗಳಿಂದ ಡೀಸೆಲ್ ಸ್ಮಗ್ಲಿಂಗ್ | ಕರ್ನಾಟಕದಲ್ಲಿ ಬೃಹತ್ ಜಾಲ ಬಯಲು!



















