ಬೆಂಗಳೂರು: ಸರಸ್ವತಿ ಸಮ್ಮಾನ್ ಪುರಸ್ಕೃತ, ನಾಡಿನ ಹಿರಿಯ ಸಾಹಿತಿ ಎಸ್‌ಎಲ್ ಭೈರಪ್ಪ ವಿಧಿವಶರಾಗಿದ್ದಾರೆ. 94 ವರ್ಷ ವಯಸ್ಸಾಗಿದ್ದ ಬೈರಪ್ಪ ಅವರು ಇತ್ತೀಚೆಗೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿರುವ ಇವರ ಕೃತಿಗಳು ಇಂಗ್ಲೀಷ್ ಹಾಗೂ ಭಾರತೀಯ ಭಾಷೆಗಳಿಗೆ ಅನುವಾದಗೊಂಡು ಭಾರತದ ಸಾಹಿತ್ಯವಲಯದಲ್ಲಿ ಹೆಸರಾಗಿದ್ದಾರೆ. ಇವರ ಕಾದಂಬರಿಗಳು ಹಲವಾರು ಮರುಮುದ್ರಣಗಳನ್ನು ಕಂಡು ಕನ್ನಡದ ಜನಪ್ರಿಯ ಬರಹಗಾರರಾಗಿದ್ದಾರೆ.

ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಸಂತೇಶಿವರದಲ್ಲಿ ಜುಲೈ 7, 1924 ರಂದು ಲಿಂಗಣ್ಣಯ್ಯ ಮತ್ತು ಗೌರಮ್ಮ ದಂಪತಿಗಳ ಪುತ್ರನಾಗಿ ಜನಿಸಿದ ಭೈರಪ್ಪನವರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲೇ ಪಡೆದರು. ಪ್ರೌಢ ಶಿಕ್ಷಣ ಹಾಗೂ ಕಾಲೇಜು ಓದು ಮೈಸೂರಿನಲ್ಲಿ ಮುಂದುವರೆಸಿದ್ದಾರೆ. ಎಂ.ಎ.ನಲ್ಲಿ ಸುವರ್ಣ ಪದಕದೊಂದಿಗೆ ತೇರ್ಗಡೆಯಾದರು. ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಿಂದ “ಸತ್ಯ ಮತ್ತು ಸೌಂದರ್ಯ”, ಎಂಬ ಇಂಗ್ಲಿಷ್‌ನಲ್ಲಿ ರಚಿಸಿದ ಮಹಾ ಪ್ರಬಂಧಕ್ಕಾಗಿ ಡಾಕ್ಟರೇಟ್ ಪದವಿ ಗಳಿಸಿದ್ದಾರೆ.
“ಸಂದ ಗೌರವ ಪ್ರಶಸ್ತಿಗಳು”
ತಮ್ಮ ಸಾಹಿತ್ಯ ಸೇವೆಗಾಗಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. “ತಂತು” ಕಾದಂಬರಿಗೆ ಭಾರತೀಯ ಭಾಷಾ ಪರಿಷತ್ತಿನ ಪ್ರಶಸ್ತಿ ಲಭಿಸಿದೆ. “ದಾಟು” ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. “ವಂಶವೃಕ್ಷ”, “ಸಾಕ್ಷಿ”, “ದಾಟು” ಕಾದಂಬರಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ. 1994 ರಲ್ಲಿ ಮಾಸ್ತಿ ಪ್ರಶಸ್ತಿ ಹಾಗೂ 1985 ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಅವರಿಗೆ ಸಂದಿದೆ.

1999 ರಲ್ಲಿ ಕನಕಪುರದಲ್ಲಿ ನಡೆದ 67ನೇ ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದ ಗೌರವ ಅವರಿಗೆ ಸಿಕ್ಕಿತು. ಸರಸ್ವತೀ ಸಮ್ಮಾನ್ ಪ್ರಶಸ್ತಿಯನ್ನು ಕನ್ನಡದಲ್ಲಿ ಪಡೆದವರಲ್ಲಿ ಇವರು ಮೊದಲಿಗರು. ಭಾರತ ಸರ್ಕಾರವು 2023ನೇ ಸಾಲಿನಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
“ವೃತ್ತಿ ಜೀವನ”
ಭೈರಪ್ಪನವರು ವೃತ್ತಿ ಜೀವನದಲ್ಲಿಯೂ ಹಲವು ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅವರು ಹುಬ್ಬಳ್ಳಿಯ ಕಾಡುಸಿದ್ಧೇಶ್ವರ ಕಾಲೇಜಿನಲ್ಲಿ ಅಧ್ಯಾಪಕರಾಗಿ (1958-60) ಸೇವೆ ಸಲ್ಲಿಸಿದರು. ಗುಜರಾತಿನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ (1960-66) ಕಾರ್ಯ ನಿರ್ವಹಿಸಿದರು. ದೆಹಲಿಯ ರಾಷ್ಟ್ರೀಯ ಶಿಕ್ಷಣ ಮತ್ತು ತರಬೇತಿ ಶಿಕ್ಷಣ ಸಂಸ್ಥೆಯಲ್ಲಿ ಉಪಪ್ರಾಧ್ಯಾಪಕರಾಗಿ (1967-1971) ಸೇವೆ ಸಲ್ಲಿಸಿದರು. ನಂತರ ಮೈಸೂರಿನ ಪ್ರಾದೇಶಿಕ ಶಿಕ್ಷಣ ಕಾಲೇಜಿಗೆ ವರ್ಗವಾಗಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ 1991ರಲ್ಲಿ ನಿವೃತ್ತರಾದರು.

“ಇವರ ಕೃತಿಗಳು”
ಭೈರಪ್ಪನವರ ಕಾದಂಬರಿಗಳು ಜನಪ್ರಿಯವಾಗಿವೆ. ಅವು ಹಲವು ಬಾರಿ ಮರುಮುದ್ರಣಗೊಂಡಿವೆ. ಅವರ ಕೃತಿಗಳು ಮರಾಠಿ, ಇಂಗ್ಲಿಷ್, ಹಿಂದಿ ಮೊದಲಾದ ಭಾಷೆಗಳಿಗೆ ಅನುವಾದವಾಗಿವೆ. “ವಂಶವೃಕ್ಷ”, “ತಬ್ಬಲಿಯು ನೀನಾದೆ ಮಗನೆ” ಕಾದಂಬರಿಗಳು ಚಲನಚಿತ್ರಗಳಾಗಿವೆ.
ಭೈರಪ್ಪನವರು ಕಾದಂಬರಿಗಳ ಜೊತೆಗೆ ಸೌಂದರ್ಯ ಮೀಮಾಂಸೆಯ ಹಲವಾರು ಗ್ರಂಥಗಳನ್ನು ರಚಿಸಿದ್ದಾರೆ. “ಸತ್ಯ ಮತ್ತು ಸೌಂದರ್ಯ” ಇವರು ರಚಿಸಿದ ಪಿ ಎಚ್ ಡಿ ಗ್ರಂಥವಾಗಿದೆ. “ಸಾಹಿತ್ಯ ಮತ್ತು ಪ್ರತೀಕ”, “ಕಥೆ ಮತ್ತು ಕಥಾವಸ್ತು” ಗ್ರಂಥಗಳು ಸಾಹಿತ್ಯ ಮೀಮಾಂಸೆಗೆ ಸಂಬಂಧಿಸಿವೆ. “ನಾನೇಕೆ ಬರೆಯುತ್ತೇನೆ”, “ಭಿತ್ತಿ” ಆತ್ಮವೃತ್ತಾ ಗ್ರಂಥಗಳಾಗಿವೆ. “ಆವರಣ”, “ಕವಲು” ಅವರ ಇತ್ತೀಚಿನ ಕಾದಂಬರಿಗಳು. ಅವರ ಪ್ರಮುಖ ಕಾದಂಬರಿಗಳೆಂದರೆ: “ವಂಶವೃಕ್ಷ”, “ದಾಟು”, “ತಂತು”, “ಅಂಚು”, “ಪರ್ವ”, “ಗೃಹಭಂಗ”, “ಅನ್ವೇಷಣ”, “ಮಂದ್ರ”, “ಸಾರ್ಥ”, “ನಾಯಿನೆರಳು”, “ಧರ್ಮಶ್ರೀ”, “ದೂರಸರಿದರು”, “ಮತದಾನ” ಮುಂತಾದವು.