ಬೆಂಗಳೂರು : ಕನ್ನಡ ಚಲನಚಿತ್ರ ಪತ್ರಿಕೋದ್ಯಮದಲ್ಲಿ ಕಳೆದ ಮೂರು ದಶಕಗಳಿಂದ ಸಕ್ರಿಯರಾಗಿರುವ ಹಿರಿಯ ಪತ್ರಕರ್ತ ಎಸ್. ಜಗದೀಶ್ ಕುಮಾರ್ ಅವರಿಗೆ ಈ ಸಾಲಿನ ಪ್ರತಿಷ್ಠಿತ ‘ದ್ವಾರಕೀಶ್ ಸ್ಮಾರಕ ಪ್ರಶಸ್ತಿ’ ಘೋಷಣೆಯಾಗಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ನೀಡುವ ಈ ಗೌರವವು, ಚಿತ್ರರಂಗದ ಏಳುಬೀಳುಗಳನ್ನು ಹತ್ತಿರದಿಂದ ಕಂಡು, ವರದಿ ಮಾಡಿದ ಜಗದೀಶ್ ಅವರ ಸುದೀರ್ಘ ಅನುಭವಕ್ಕೆ ಸಂದ ಮನ್ನಣೆಯಾಗಿದೆ.
ಬೆಂಗಳೂರಿನ ನಿವಾಸಿಯಾದ ಎಸ್.ಜಗದೀಶ್ ಕುಮಾರ್ ಅವರು ವಾಣಿಜ್ಯ ಪದವಿ ಪಡೆದ ನಂತರ ಚಿತ್ರರಂಗದ ಮೇಲಿನ ಆಸಕ್ತಿಯಿಂದ ಕರ್ನಾಟಕ ಫಿಲ್ಮ್ ಟೆಕ್ನಾಲಜಿ ಟ್ರೈನಿಂಗ್ ಸೆಂಟರ್‌ನಲ್ಲಿ (KFTTC) ಡಿಪ್ಲೊಮಾ ಪೂರೈಸಿದ್ದರು. ಆರಂಭದಲ್ಲಿ ಖ್ಯಾತ ನಿರ್ದೇಶಕ ಬಿ.ಸುರೇಶ್ ಅವರ ಅಡಿಯಲ್ಲಿ ‘ಸಾಧನೆ’ಯಂತಹ ಜನಪ್ರಿಯ ಧಾರಾವಾಹಿಗಳಿಗೆ ಹಾಗೂ ಹಿರಿಯ ನಿರ್ದೇಶಕ ಎಸ್.ವಿ ರಾಜೇಂದ್ರ ಸಿಂಗ್ ಬಾಬು ಅವರ ‘ಕುರಿಗಳು ಸಾರ್ ಕುರಿಗಳು’ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು.

ಈ ಟಿವಿ ಕನ್ನಡ, ಉದಯ ಟಿವಿ ಮತ್ತು ಕಸ್ತೂರಿ ವಾಹಿನಿಗಳಲ್ಲಿ ಚಿತ್ರರಂಗಕ್ಕೆ ಸಂಬಂಧಿಸಿದ ನೂರಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ದೇಶಿಸಿದ ಹೆಗ್ಗಳಿಕೆ ಕೂಡ ಇವರದು. ವಿಶೇಷವಾಗಿ ‘ಡಿಮ್ಯಾಂಡಪ್ಪೋ ಡಿಮ್ಯಾಂಡ್’, ‘ಹೃದಯದಿಂದ’ ತಾರೆಗಳ ತೋಟ , ಹೊಸ ಪಿಚ್ಚರ್, ಟಾಪ್ 10 , ಕಾಮಿಡಿ ಟೈಮ್, ನಾಡಹಬ್ಬ, ಗೀತಾ ಸಂಭ್ರಮ, ಚಿತ್ರವಾರ್ತೆ, ನೀವೆಲ್ಲೋ.. ನಾವಲ್ಲಿ, ಸಕತ್ ಸಿನಿಮಾ, ಸನ್ ಫೀಸ್ಟ್ ಉದಯ ಅವಾರ್ಡ್, ಕಸ್ತೂರಿ ಸಿರಿಗಂಧ ಫಿಲಂ ಅವಾರ್ಡ್, ಸಪ್ತಸ್ವರ, ಡ್ರೀಮ್ ಗರ್ಲ್ಸ್ ಸೇರಿದಂತೆ ಹಲವಾರು ರಿಯಾಲಿಟಿ ಶೋ , ಲೈವ್ ಕಾರ್ಯಕ್ರಮಗಳನ್ನು ನಿರ್ವಹಣೆಯ ಮೂಲಕ ಬೃಹತ್ ಕಾರ್ಯಕ್ರಮಗಳನ್ನು ಸಂಘಟಿಸಿದ ಅನುಭವ ಇವರಿಗಿದೆ.
ದೃಶ್ಯ ಮಾಧ್ಯಮಕ್ಕೆ ಮಾತ್ರ ಸೀಮಿತವಾಗದೆ, ಮುದ್ರಣ ಮಾಧ್ಯಮದಲ್ಲಿಯೂ ತಮ್ಮ ಬರಹಗಳ ಮೂಲಕ ಗುರುತಿಸಿಕೊಂಡಿರುವ ಎಸ್. ಜಗದೀಶ್ ಈ ಸಂಜೆ ಪತ್ರಿಕೆಯ ವರದಿಗಾರರಾಗಿ ಸಾಕಷ್ಟು ವರ್ಷ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಸಿನಿ ಸುದ್ದಿ ವೆಬ್ ಸಂಸ್ಥೆಯ ಸಂಪಾದಕರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಪ್ರಸ್ತುತ ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿರುವ ಇವರು, ಚಿತ್ರರಂಗದ ಕಲಾವಿದರು, ನಿರ್ಮಾಪಕರು ಹಾಗೂ ತಂತ್ರಜ್ಞರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹಾಗೆಯೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ವಿತರಕರ ವಲಯದಲ್ಲಿದ್ದಾರೆ, ಮಂಡಳಿಯ ಸಮಿತಿ ಸದಸ್ಯರಾಗಿಯೂ ಸಹ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರರಂಗದ ಒಳಹೊರಗುಗಳನ್ನು ಅರಿತ ಒಬ್ಬ ಬದ್ಧತೆಯುಳ್ಳ ಪತ್ರಕರ್ತನಿಗೆ ಈ ಪ್ರಶಸ್ತಿ ಲಭಿಸಿರುವುದು ಮಾಧ್ಯಮ ಲೋಕದಲ್ಲಿ ಹರ್ಷ ಮೂಡಿಸಿದೆ.
ಇದನ್ನೂ ಓದಿ : ಯುದ್ಧದಿಂದ ಅಮೆರಿಕ ಹಿಂದೆ ಸರಿಯುವ ಮುನ್ಸೂಚನೆ.. ಇಸ್ರೇಲ್‌ನಿಂದ ದಾಳಿ ಮುಂದುವರಿಸುವ ಪ್ರತಿಜ್ಞೆ!



















