
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಿನ್ನೆ (ಜೂ.28 ಸಂಜೆ) ಪ್ರಜಾವಾಣಿ ಪತ್ರಿಕೆ ಆಯೋಜಿಸಿದ್ದ ‘ ಕನ್ನಡ ಸಿನಿ ಸಮ್ಮಾನ’ ಸಮಾರಂಭವು ಬಲು ಅದ್ಧೂರಿಯಾಗಿ ನೆರವೇರಿತು. ಕನ್ನಡ ಚಿತ್ರರಂಗಕ್ಕಾಗಿ ದುಡಿದವರಿಗಾಗಿ ಮತ್ತು ದುಡಿಯುತ್ತಿರುವವರಿಗಾಗಿ ನಡೆಸಲಾಗುತ್ತಿರುವ ಈ ವಿಶೇಷ ಕಾರ್ಯಕ್ರಮವು, ಇದು ಎರಡನೇ ಆವೃತ್ತಿ ಯದ್ದಾಗಿದೆ. ಕನ್ನಡಚಿತ್ರರಂಗದ ಹಿರಿ-ಕಿರಿಯ ಕಲಾವಿದರು, ತಂತ್ರಜ್ಞರ ಜೊತೆ ರಾಜಕಾರಣಿಗಳು, ವಿವಿದ ಕ್ಷೇತ್ರದ ಉದ್ಯಮಿಗಳು, ಪತ್ರಕರ್ತರು ಹಾಗೂ ಸಿನಿರಸಿಕರು ಸಭಾಂಗಣದಲ್ಲಿ ತುಂಬಿ ನೆರೆದು, ಕಾರ್ಯಕ್ರಮವು ಅಭೂತಪೂರ್ವ ಯಶಸ್ಸು ಕಂಡಿತು.
ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದೆ ‘ಬಿ. ಸರೋಜಾ ದೇವಿ’ ಯವರನ್ನು ಈ ಆವೃತ್ತಿಯಲ್ಲಿ ‘ಜೀವಮಾನ ಸಾಧನೆ’ ಪ್ರಶಸ್ತಿಗೆ ಆಯ್ಕೆ ಮಾಡಿ ಪ್ರದಾನ ಮಾಡಲಾಯಿತು. ಎಂಬತ್ತಾರು ವರ್ಷದ ಹಿರಿಯ ಕಲಾವಿದೆ ವೇದಿಕೆಗೆ ಬರುತ್ತಿದ್ದಂತೆ ನೆರೆದಿದ್ದ ಸಭಿಕರು ಎದ್ದು ನಿಂತು, ಚಪ್ಪಾಳೆ ತಟ್ಟಿ ಗೌರವಪೂರ್ವಕವಾಗಿ ಸ್ವಾಗತಿಸಿದರು. ಚಿತ್ರರಂಗದಲ್ಲಿ ಅನನ್ಯ ಸಾಧನೆ ಗೈದು, ಜನಮನ ರಂಜಿಸಿದ ಈ ಮೇರು ನಟಿಗೆ, ಪ್ರಜಾವಾಣಿ ಪತ್ರಿಕೆಯವರು ” ಕನ್ನಡ ಸಿನಿ ಸಮ್ಮಾನ” ಕಾರ್ಯಕ್ರಮದ ಅಡಿಯಲ್ಲಿ “ಜೀವಮಾನ ಸಾಧನೆ” ಪ್ರಶಸ್ತಿ ನೀಡಿ ಗೌರವಿಸಿದ್ದು ನಿಜಕ್ಕೂ ಅರ್ಥಪೂರ್ಣವಾಗಿತ್ತು.


ಸೆಂಚೂರಿ ಸ್ಟಾರ್ ನಟ ಶಿವರಾಜ್ ಕುಮಾರ್ ಅವರಿಗೆ ‘ಸಿನಿ ಧ್ರುವತಾರೆ’ ಪ್ರಶಸ್ತಿ ನೀಡಿಲಾಯಿತು. ಈ ವೇಳೆ ಶಿವಣ್ಣ ವೇದಿಕೆ ಏರುತ್ತಿದ್ದಂತೆಯೇ ಅವರ ಫೇವರೇಟ್ “ಟಗರು ಚಿತ್ರದ ವಾರೆ ನೋಟ ನೋಡೈತೆ” ಹಾಡು ಹಾಕಲಾಯಿತು. ಹಾಡಿನ ಸದ್ದು ಕೇಳುತ್ತಿದ್ದಂತೆಯೇ ಶಿವಣ್ಣನ ಕಾಲು ಕುಣಿಯತೊಡಗಿತು. ಎಂದಿನಂತೆ ಸಖತ್ ಎನರ್ಜಿಯಲ್ಲಿದ್ದಂತೆ ಕಾಣಿಸುತ್ತಿದ್ದ ಅವರು, ಭರ್ಜರಿ ಸ್ಟೆಪ್ ಹಾಕಿ ಜನಮನ ಗೆದ್ದರು. ಪ್ರೇಕ್ಷಖರು ಶಿವಣ್ಣನ ಎನರ್ಜಿಗೆ ಎದ್ದು ನಿಂತು ಚಪ್ಪಾಳೆ, ಶಿಳ್ಳೆ ಹೊಡೆದು ಗೌರವಿಸಿದರು. ಪ್ರೇಕ್ಷಕರ ಪ್ರೀತಿ ಕಂಡು ಭಾವುಕತೆಯಲ್ಲೇ ಮಾತಾಡಿದ ಅವರು ” ನಾವು ಎಂಟರ್ ಟೈನರ್ಸ್; ಎಲ್ಲಿದ್ದರೂ ಜನ ಮನರಂಜಸಬೇಕು. ಅದೇ ನಮ್ಮ ಕರ್ತವ್ಯ ಎಂದು ಪ್ರೇಕ್ಷಕರ ಪ್ರೀತಿಗೆ ಗೌರವಿಸಿದರು.

ಕನ್ನಡ ಚಿತ್ರರಂಗದಲ್ಲಿ ಸದ್ಯ ನಟ, ನಿರ್ಮಾಪಕರಾಗಿ ಸಖತ್ ಸದ್ದು ಮಾಡುತ್ತಿರುವ ಡಾಲಿ ಧನಂಜಯ್ ಕಾರ್ಯವೈಖರಿ ಗಮನಿಸಿದ ಪ್ರಜಾವಾಣಿ ಪತ್ರಿಕಾ ತಂಡ “ಕನ್ನಡ ಸಿನಿ ಸಮ್ಮಾನ”ದ ‘ಅತ್ಯುತ್ತಮ ಸಾಧಕ ಪ್ರಶಸ್ತಿಗೆ ಆಯ್ಕೆ ಮಾಡಿ ಪ್ರದಾನ ಮಾಡಿತು.
ಇನ್ನು ವರ್ಷದ ಅತ್ಯುತ್ತಮ ಚಿತ್ರವಾಗಿ “ಡೇರ್ ಡೆವಿಲ್ ಮುಸ್ತಾಫಾ” ಆಯ್ಕೆಯಾದರೆ, ಇದೇ ಚಿತ್ರದ ಪ್ರತಿಭಾವಂತ ಕಲಾವಿದ ‘ಶಿಶಿರ್ ಬೈಕಾಡಿ’ ಅತ್ಯುತ್ತಮ ನಟ ಪ್ರಶಸ್ತಿ ಮುಡಿಗೇರಿಸಿದರು. ಅತ್ಯುತ್ತಮ ನಟಿಯಾಗಿ ರುಕ್ಮಿಣಿ ವಸಂತ್ ಪ್ರಶಸ್ತಿ ಪಡೆದರೆ, ಅತ್ಯುತ್ತಮ ಪೋಷಕ ನಟರಾಗಿ ರಂಗಾಯಣ ರಘು(ಟಗರು ಪಲ್ಯ), ಅತ್ಯುತ್ತಮ ಪೋಷಕ ನಟಿಯಾಗಿ ತಾರಾ ಅನುರಾಧ(ಟಗರು ಪಲ್ಯ), ಅತ್ಯುತ್ತಮ ನಿರ್ದೇಶಕರಾಗಿ ಹೇಮಂತ್ ರಾವ್ (ಸಪ್ತ ಸಾಗರಾದಾಚೆ ಎಲ್ಲೋ ಸೈಡ್-ಎ) ಅತ್ಯುತ್ತಮ ಚೊಚ್ಚಲ ನಿರ್ದೇಶನಕ್ಕಾಗಿ ನಿತಿನ್ ಕೃಷ್ಣಮೂರ್ತಿ (ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ), ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ಹರಿಕೃಷ್ಣ (ಕಾಟೇರ), ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ಅಭಿಮನ್ಯು ಸದಾನಂದನ್ (ಆಚಾರ್& ಕೋ), ಅತ್ಯುತ್ತಮ ಸಂಕಲನಕ್ಕಾಗಿ ದೀಪು ಎಸ್. ಕುಮಾರ್(ಘೋಸ್ಟ್), ಅತ್ಯುತ್ತಮ ಚಿತ್ರಕತೆಗಾಗಿ ಜಡೇಶ ಕೆ.ಹಂಪಿ ಮತ್ತು ತರುಣ್ ಕಿಶೋರ್ ಸುಧೀರ್ (ಕಾಟೇರ), ಅತ್ಯುತ್ತಮ ಹಿನ್ನೆಲೆ ಗಾಯಕರಾಗಿ ಕಪಿಲ್ ಕಪಲನ್ (ಸಪ್ತ ಸಾಗರಾದಾಚೆ ಎಲ್ಲೋ ಸೈಡ್-A ಟೈಟಲ್ ಟ್ರ್ಯಾಕ್), ಅತ್ಯುತ್ತಮ ಹಿನ್ನೆಲೆ ಗಾಯಕಿಯಾಗಿ ಶ್ರೀ ಲಕ್ಷ್ಮೀ ಬೆಳ್ಮಣ್ಣು (ಸಪ್ತ ಸಾಗರದಾಚೆ ಎಲ್ಲೋ ಸೈಡ್-A ಹಾಡು-ಕಡಲನು ಕಾಣ ಹೊರಟಿರೋ), ಅತ್ಯುತ್ತಮ ಗೀತ ಸಾಹಿತ್ಯ (ನದಿಯೇ ಓ ನದಿಯೇ) ಧನಂಜಯ್ ರಂಜನ್ (ಸಪ್ತ ಸಾಗರದಾಚೆ ಎಲ್ಲೋ ಸೈಡ್-A), ಅತ್ಯುತ್ತಮ ನೃತ್ಯ ನಿರ್ದೇಶನಕರಾಗಿ ಕಾಟೇರ ಪಸಂದಾಗವ್ನೆ ಹಾಡಿಗೆ ನೃತ್ಯ ಸಂಯೋಜಿಸಿದ್ದ ಭೂಷಣ್ ಆಯ್ಕೆಯಾದರು.

ಹಾಗೆಯೇ, ಸಾಮಾಜಿಕ ಪರಿಣಾಮ ಬೀರಿದ ಚಿತ್ರವಾಗಿ “ಪಿಂಕಿ ಎಲ್ಲಿ?”, ಅತ್ಯುತ್ತಮ ನಿರ್ಮಾಣ ವಿನ್ಯಾಸಕ್ಕಾಗಿ “19.20.2” ಚಿತ್ರ, ವಿಎಫ್ ಎಕ್ಸ್-ಪೋಸ್ಟ್ ಪ್ರೊಡಕ್ಷನ್-ಆನಿಮೇಶನ್ ಗಾಗಿ “ಕಬ್ಜ” ಚಿತ್ರ ಆಯ್ಕೆಯಾಯಿತು. ಧ್ವನಿ ಗ್ರಹಣ ಹಾಗೂ ಶಬ್ಧ ವಿನ್ಯಾಸಕ್ಕಾಗಿ ಸಪ್ತ ಸಾಗರದಾಚೆ ಎಲ್ಲೋ (ಸೈಡ್ -A) ಚಿತ್ರ ಪ್ರಶಸ್ತಿ ಬಾಚಿಕೊಂಡಿತು. ಇನ್ನು ಜನಮೆಚ್ಚಿದ ಚಿತ್ರವಾಗಿ ಕಾಟೇರ ಆಯ್ಕೆಯಾದರೆ, ಜನಮೆಚ್ಚಿದ ನಟ-ನಟಿಯರಾಗಿ ರಕ್ಷಿತ್ ಶೆಟ್ಟಿ ಹಾಗೂ ರುಕ್ಣಿಣಿ ವಸಂತ್ ಪ್ರಶಸ್ತಿ ಮುಡಿಗೇರಿಸಿಕೊಂಡರು. ಹಾಗೆಯೇ, ಇದೇ “ಸಪ್ತ ಸಾಗರದಾಚೆ ಎಲ್ಲೋ” ಚಿತ್ರದ ಸಂಗೀತವು “ಜನಮೆಚ್ಚಿದ ಸಂಗೀತ”ವಾಗಿ ಆಯ್ಕೆಗೊಂಡಿತು.
ಒಟ್ಟಿನಲ್ಲಿ ಪ್ರಜಾವಾಣಿ ಪತ್ರಿಕೆ ಆರೋಜಿಸಿದ ಕನ್ನಡ ಸಿನಿ ಸಮ್ಮಾನ ಸಮಾರಂಭವು ಭರ್ಜರಿಯಾಗಿ ಯಶ ಕಂಡಿತು. ನಾನಾ ಭಾಗಗಳಿಂದ ಬಂದಿದ್ದ ಗಣ್ಯರು ಹಾಗೂ ಸಿನಿರಸಿಕರು ಮನರಂಜನೆಯಲ್ಲಿ ಮಿಂದೆದ್ದು ಹೋದರು.
