ಬೆಂಗಳೂರು: ಜಿಬಿಎ(GBA) ವ್ಯಾಪ್ತಿಯ 5 ನಗರಪಾಲಿಕೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಅದೇಶ ಬೆನ್ನಲ್ಲೇ ನಾಲ್ಕು ನಗರಪಾಲಿಕೆ ಅಧಿಕಾರಿಗಳು ಚುನಾವಣೆ ಮುಗಿದ ನಂತರ ಕೌನ್ಸಿಲ್ ಸಭೆ ನಡೆಸಲು ಜಾಗ ಹುಡುಕಾಟ ನಡೆಸುತ್ತಿದ್ದಾರೆ.
ಈಗಾಗಲೇ ಕೇಂದ್ರ ನಗರಪಾಲಿಕೆಗೆ ಹಳೆಯ ಜಿಬಿಎ ಕೇಂದ್ರ ಕಛೇರಿಯಲ್ಲಿ ಇರುವ ಕೌನ್ಸಿಲ್ ಕಟ್ಟಡ ಇದೆ. ಅದರೆ ಉಳಿದ ನಾಲ್ಕು ನಗರಪಾಲಿಕೆಗೆ ಚುನಾಯಿತ ಪ್ರತಿನಿಧಿಗಳು ಬಂದರೆ ಕೌನ್ಸಿಲ್ ನಡೆಸಲು ಕಟ್ಟಡ ಇಲ್ಲ. ಈ ಹಿನ್ನೆಲೆಯಲ್ಲಿ ನಾಲ್ಕು ನಗರಪಾಲಿಕೆ ಅಧಿಕಾರಿಗಳು ಕೌನ್ಸಿಲ್ ಸಭೆ ನಡೆಸಲು ತಮ್ಮ ವಲಯಗಳಲ್ಲಿ ದೊಡ್ಡ ಮಟ್ಟದ ಆಡಿಟೋರಿಯಂ ಅಥವಾ ಸಭಾಂಗಣ ಹುಡುಕಾಟ ನಡೆಸುತ್ತಿದ್ದಾರೆ.
ಅಂದುಕೊಂಡಂತೆ ಚುನಾವಣೆ ಆದರೆ ಜೂನ್ ಮೊದಲ ವಾರದಲ್ಲಿ ಮೊದಲ ಕೌನ್ಸಿಲ್ ಸಭೆ ನಡೆಸಬೇಕು. ಈ ಹಿನ್ನೆಲೆಯಲ್ಲಿ ತಮ್ಮ ವಲಯಗಳಲ್ಲಿ ಸುಮಾರು 150 ರಿಂದ 200 ಮಂದಿ ಕುಳಿತು ಕೊಳ್ಳುವ ಆಡಿಟೋರಿಯಂ ಅಥವಾ ಸಭಾಂಗಣ ತಲಾಶ ನಡೆಸುತ್ತಿದ್ದಾರೆ.
ಇನ್ನೂ ಖಾಸಗಿ ಆಡಿಟೋರಿಯಂನಲ್ಲಿ ಕೌನ್ಸಿಲ್ ಸಭೆ ನಡೆಸಿದರೆ ಅದರ ಖರ್ಚು ವೆಚ್ಚ ಅಯಾ ನಗರಪಾಲಿಕೆ ಪಾವತಿ ಮಾಡಬೇಕು ಎಂದು ಸೂಚನೆ ನೀಡಲಾಗಿದ್ದು, ಖಾಸಗಿ ಅಥವಾ ಸರ್ಕಾರಿ ಆಡಿಟೋರಿಯಂ ಇದ್ದರೆ ಅವುಗಳಲ್ಲಿ ಸಭೆ ನಡೆಸಲು ಬೇಕಾದ ಇನ್ಪಸ್ಟ್ರಚರ್ ಇರಬೇಕು ಎಂದು ಕೂಡ ಸೂಚನೆ ನೀಡಲಾಗಿದೆ. ಆದಷ್ಟು ಬೇಗ ಕಟ್ಟಡ ಗುರುತು ಮಾಡಿ ಜಿಬಿಎಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ ಎಂದು ಜಿಬಿಎ ಮುಖ್ಯ ಅಯುಕ್ತ ಮಹೇಶ್ವರ ರಾವ್ ತಿಳಿಸಿದ್ದಾರೆ.
ಇದನ್ನೂ ಓದಿ: ಸಾರಿಗೆ ಕಾರ್ಮಿಕರ ಮುಖಂಡ ಅನಂತ್ ಸುಬ್ಬರಾವ್ ನಿಧನ.. ನಾಳೆಯ ‘ಬೆಂಗಳೂರು ಚಲೋ’ ಮುಂದೂಡಿಕೆ!



















