ಹುಬ್ಬಳ್ಳಿ: ರಂಜಾನ್ (Ramzan) ಹಬ್ಬದ ಹಿನ್ನೆಲೆಯಲ್ಲಿ ಶಾಂತಿಯುತ ರಂಜಾನ್ ಪ್ರಾರ್ಥನೆ ನಡೆಯುತ್ತಿದ್ದರೆ, ಹಲವೆಡೆ ಕಪ್ಪು ಪಟ್ಟಿ ಧರಿಸಿ ಮುಸ್ಲಿಂ ಸಮುದಾಯದವರು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ, ಪ್ರಾರ್ಥನೆ ಸಲ್ಲಿಸಿದ್ದಾರೆ.
ಪ್ಲೇ ಕಾರ್ಡ್ ಹಿಡಿದು, ಕೈಗೆ ಕಪ್ಪು ಪಟ್ಟಿ ಧರಿಸಿ ಎಸ್‌ಡಿಪಿಐ (SDPI) ಕಾರ್ಯಕರ್ತರು ಅಸಮಾಧಾನ ಹೊರಹಾಕಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಚೆನ್ನಮ್ಮ ವೃತ್ತದ ಬಳಿ ಕಪ್ಪು ಪಟ್ಟಿ ಧರಿಸಿ ಅಸಮಾಧಾನ ಹೊರಹಾಕಿದರು.
ಪ್ಯಾಲೆಸ್ಟಿನ್‌ನಲ್ಲಿ ಯುದ್ಧ ನಿಲ್ಲಬೇಕು. ಎಸ್‌ಡಿಪಿಐ ಅಧ್ಯಕ್ಷ ಎಂಕೆ ಫೈಜಿ ಬಿಡುಗಡೆಯಾಗಬೇಕು. ವಕ್ಫ್ ಆಸ್ತಿ ಎಂದಿಗೂ ಮುಸ್ಲಿಮರದ್ದೇ. ದೇಶ, ಮನಸ್ಸು ಒಡೆದವರು ಮುಸ್ಲಿಂ ಆಸ್ತಿ ಮೇಲೆ ಕಣ್ಣು ಹಾಕಿದ್ದಾರೆ ಎಂದು ಪೋಸ್ಟರ್ ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೇ, ಸಂಘ ಪರಿವಾರ ಅವಹೇಳನ ಮಾಡಿ ಪ್ಲೇ ಕಾರ್ಡ್ ಪ್ರದರ್ಶನ ಮಾಡಲಾಗಿದೆ. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹಿಂದೂಪರ ಸಂಘಟನೆಗಳು ಎಸ್‌ಡಿಪಿಐ ಕಾರ್ಯಕರ್ತರ ಮೇಲೆ ದೂರು ದಾಖಲಿಸಿದೆ. ಹಿಂದೂಗಳ ಭಾವನೆಗೆ ದಕ್ಕೆ ತಂದಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ. ವಿಶ್ವಹಿಂದೂ ಪರಿಷತ್, ಭಜರಂಗದಳ, ಹಿಂದೂ ವಕೀಲರ ಸಂಘದಿಂದ ದೂರು ಕೊಡಲಾಗಿದೆ.