ರಾಮನಗರ: ವಿದ್ಯಾರ್ಥಿನಿಯರು ಜಡೆ ಹಾಕಿಲ್ಲವೆಂಬ ಕಾರಣಕ್ಕೆ ಶಿಕ್ಷಕರು(Teachers) ಕೂದಲನ್ನೇ ಕತ್ತರಿಸಿರುವ ಘಟನೆ ನಡೆದಿದೆ.
ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್ರ ಎಂಬ ಗ್ರಾಮದಲ್ಲಿನ ಸರ್ಕಾರಿ ಪ್ರಾಢ ಶಾಲೆಯಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿನಿಯರು ಎರಡು ಜಡೆ ಹಾಕಿಲ್ಲವೆಂಬ ಕಾರಣಕ್ಕೆ ಶಿಕ್ಷಕರು ಕೂದಲನ್ನು ಕತ್ತರಿಸಿದ್ದಾರೆ. ಶಾಲೆಗೆ ಬರುವಾಗ ಎರಡು ಜಡೆ ಹಾಕಿಲ್ಲವೆಂದು 8ನೇ ತರಗತಿಯ ಮೂವರು ವಿದ್ಯಾರ್ಥಿನಿಯರ ಕೂದಲಿಗೆ ಕತ್ತರಿ ಹಾಕಿದ್ದಾರೆ. ದೈಹಿಕ ಶಿಕ್ಷಕ ಶಿವಕುಮಾರ, ಸಹಶಿಕ್ಷಕಿ ಪವಿತ್ರಾ ಎಂಬುವವರಿಂದ ಈ ಕೃತ್ಯ ನಡೆದಿದೆ.
ಶಿಕ್ಷಕರ ಅಮಾನವೀಯ ಕೃತ್ಯಕ್ಕೆ ವಿದ್ಯಾರ್ಥಿನಿಯರ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಗೆ ಆಗಮಿಸಿದ ಪೋಷಕರು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಘಟನೆ ಬೆನ್ನಲ್ಲೇ ಅರಳಾಳುಸಂದ್ರ ಶಾಲೆಗೆ ಅಕ್ಕೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
