ರಾಯಚೂರು: ಶಾಲಾ ಬಸ್ ಹಾಗೂ ಸಾರಿಗೆ ಬಸ್ ಮಧ್ಯೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಹತ್ತಿರ ಈ ಘಟನೆ ನಡೆದಿದೆ. ಮೊದಲನೇ ತರಗತಿ ವಿದ್ಯಾರ್ಥಿ ಸಮರ್ಥ, ಏಳನೇ ತರಗತಿ ವಿದ್ಯಾರ್ಥಿ ಶ್ರೀಕಾಂತ ಸಾವನ್ನಪ್ಪಿರುವ ವಿದ್ಯಾರ್ಥಿಗಳು. ಅಲ್ಲದೇ, ಶಾಲಾ ಬಸ್ಸಿನಲ್ಲಿ ಇದ್ದ ಮೂವರು ವಿದ್ಯಾರ್ಥಿಗಳ ಕಾಲುಗಳು ತುಂಡಾಗಿವೆ.
ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಖಾಸಗಿ ಶಾಲೆಯ ಬಸ್ ವೊಂದು ಕಪಗಲ್ ನಿಂದ ಮಾನ್ವಿ ಕಡೆ ಹೊರಟಿತ್ತು. ಸಾರಿಗೆ ಬಸ್ ಸಿಂಧನೂರು ಕಡೆಯಿಂದ ರಾಯಚೂರು ಕಡೆಗೆ ಹೊರಟ್ಟಿದ್ದ ಸಂದರ್ಭದಲ್ಲಿ ಪರಸ್ಪರ ಡಿಕ್ಕಿಯಾಗಿವೆ. ಡಿಕ್ಕಿ ರಭಸಕ್ಕೆ ಮಕ್ಕಳಿಬ್ಬರ ಕಾಲುಗಳು ತುಂಬಾಡಿವೆ. ತೀವ್ರ ರಕ್ತ ಸ್ರಾವವಾಗಿ ಸಾವನ್ನಪ್ಪಿದ್ದಾರೆ. ಓರ್ವ ಬಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಸ್ಥಳದಲ್ಲಿ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಮಕ್ಕಳ ಕಾಲು ತುಂಡಾಗಿರುವ ಸ್ಥಿತಿ ಕಂಡು ಪೋಷಕರು ಕಣ್ಣೀರು ಸುರಿಸುತ್ತಿದ್ದಾರೆ.
ಸ್ಥಳಕ್ಕೆ ಆಗಮಿಸಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಾಲಾ ಬಸ್ ನಲ್ಲಿದ್ದ 32 ಮಕ್ಕಳ ಪೈಕಿ 18 ಜನರಿಗೆ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 14 ಮಕ್ಕಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದೆ.