ಗುಬ್ಬಿ : ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ಅದಲಗೆರೆ ಗ್ರಾಮದಲ್ಲಿನ ಸರ್ಕಾರಿ ಶಾಲೆಯ ತಡೆಗೋಡಿ ಶಿಥಿಲಗೊಂಡಿತ್ತು. ಆದರೆ, ತ್ಯಾಗಟೂರು ಗ್ರಾಪಂ ಆಡಳಿತ ಅಧಿಕಾರಿಗಳು ನರೇಗಾ ಕಾಮಗಾರಿಯ ಕಮಿಷನ್ ಹಣದ ಆಸೆಗಾಗಿ ಶಾಲಾ ತಡೆಗೋಡೆ ಧ್ವಂಸ ಮಾಡಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸ್ಥಳೀಯ ಮುಖಂಡ ಶ್ರೀನಿವಾಸ್ ಮಾತನಾಡಿ, ಶಾಲೆಯ ತಡೆಗೋಡೆ ಗಟ್ಟಿಮುಟ್ಟಾಗಿಯೇ ಇತ್ತು. ಗಾಳಿಗೆ ಆಲದ ಮರದ ಕೊಂಬೆ ಬಿದ್ದಿದೆ. ಹೀಗಾಗಿ 5 ರಿಂದ 10 ಅಡಿ ಶಿಥಿಲಗೊಂಡಿದೆ. ಐದರಿಂದ ಹತ್ತು ಸಾವಿರದ ಒಳಗೆ ಶಾಲಾ ತಡೆಗೋಡೆಯನ್ನು ನಿರ್ಮಾಣಗೊಳಿಸಬಹುದಿತ್ತು. ಆದರೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ನರೇಗಾ ಕಾಮಗಾರಿಯ ಕಮಿಷನ್ ಆಸೆಗಾಗಿ ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸ್ಥಳೀಯ ನಿವಾಸಿ ಆನಂದ್ ಮಾತನಾಡಿ, ಶಾಲಾ ತಡೆಗೋಡೆ ಉತ್ತಮ ಗುಣಮಟ್ಟದಲ್ಲಿದ್ದು ತಡೆಗೋಡೆ ನವೀಕರಣಗೊಳಿಸುವ ಅವಶ್ಯಕತೆ ಸದ್ಯಕ್ಕೆ ಇರಲಿಲ್ಲ. ನರೇಗಾ ಕಾಮಗಾರಿಯ ಹಣವನ್ನು ಶಾಲಾ ಊಟದ ಕೊಠಡಿಯ ಅಭಿವೃದ್ಧಿಗೆ ಹಾಗೂ ಶಾಲೆಯ ಕ್ರೀಡಾಂಗಣ ಮತ್ತು ಶಾಲೆಯ ದುರಸ್ತಿಗೆ ಬಳಸಬಹುದಾಗಿತ್ತು. ಶಾಲೆಯನ್ನು ಆಧುನೀಕರಣಗೊಳಿಸದೆ ಶಾಲೆಯ ತಡೆಗೋಡೆಯನ್ನು ವಿನಾಕಾರಣ ಕೆಡವಿ ಸರ್ಕಾರಿ ಹಣ ದುರುಪಯೋಗ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.