ಬೆಂಗಳೂರು: ನೀವೂ ಕಾನೂನು ಪದವಿ ಅಧ್ಯಯನ ಮಾಡುತ್ತಿದ್ದೀರಾ? ನಿಮಗೆ ಅಧ್ಯಯನಕ್ಕೆ ಹಣಕಾಸು ಸಮಸ್ಯೆ ಎದುರಾಗುತ್ತಿದೆಯೇ? ಹಾಗಾದರೆ, ಚಿಂತೆ ಬೇಡ. ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯು (Department of Social Welfare) 2025-26ನೇ ಸಾಲಿಗೆ ಪರಿಶಿಷ್ಟ ಜಾತಿಗೆ ಸೇರಿದ ಕಾನೂನು ಪದವೀಧರ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಸೌಲಭ್ಯ ನೀಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೂಲಕ ಯೋಜನೆಯ ಲಾಭ ಪಡೆಯಬಹುದಾಗಿದೆ.
ಸಮಾಜ ಕಲ್ಯಾಣ ಇಲಾಖೆಯ ಅಡ್ವೊಕಸಿ ಇಂಟರ್ನ್ ಶಿಪ್ ಪ್ರೋಗ್ರಾಂ ಅನ್ವಯ ತರಬೇತಿ ಪಡೆಯುವ ವಿದ್ಯಾರ್ಥಿಗಳು ಶಿಷ್ಯವೇತನ ಪಡೆಯಲು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವವರಿಗೆ ಕೆಲ ನಿಯಮಗಳನ್ನು ರೂಪಿಸಲಾಗಿದೆ. ಅರ್ಜಿದಾರರು ಪರಿಶಿಷ್ಟ ಜಾತಿ (SC) ಸಮುದಾಯಕ್ಕೆ ಸೇರಿದವರಾಗಿರಬೇಕು. ಎಲ್ ಎಲ್ ಬಿ ಮುಗಿಸಿದ 2 ವರ್ಷಗಳೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವಾಗ ಗರಿಷ್ಠ ವಯಸ್ಸು 40 ವರ್ಷ ಆಗಿರಬೇಕು ಎಂದು ತಿಳಿಸಲಾಗಿದೆ.
ಅಲ್ಲದೆ, ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯ 2,50,000 ರೂಪಾಯಿಗಿಂತ ಹೆಚ್ಚಿರಬಾರದು. ಅರ್ಜಿದಾರರು ಕರ್ನಾಟಕ ರಾಜ್ಯ ವಕೀಲರ ಸಂಘ ಮತ್ತು ಬಾರ್ ಕೌನ್ಸಿಲ್ ನಲ್ಲಿ ನೋಂದಣಿ ಮಾಡಿಕೊಂಡಿರಬೇಕು. ಅಲ್ಲದೆ, ಅರ್ಜಿದಾರರು ಮೈಸೂರು ಜಿಲ್ಲೆಯವರಾಗಿರಬೇಕು ಎಂದು ತಿಳಿಸಲಾಗಿದೆ.
ಇದಕ್ಕೂ ಮೊದಲು, ಜಿಲ್ಲಾಧಿಕಾರಿ ಕಚೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅಥವಾ ಇತರ ಸರ್ಕಾರಿ ಸಂಸ್ಥೆಗಳಿಂದ ತರಬೇತಿ ಪಡೆದವರಿಗೆ ಈ ಸ್ಕಾಲರ್ ಶಿಪ್ ಯೋಜನೆ ಅನ್ವಯಿಸುವುದಿಲ್ಲ. ಅಭ್ಯರ್ಥಿಗಳು ಅರ್ಜಿ ಪ್ರಕ್ರಿಯೆ ಮತ್ತು ಅಗತ್ಯ ದಾಖಲೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತಿ.ನರಸೀಪುರ ಸಮಾಜ ಕಲ್ಯಾಣ ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದು. ಸೂಕ್ತ ದಾಖಲೆಗಳೊಂದಿಗೆ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಲಾಗಿದೆ.



















