ಬೆಂಗಳೂರು: ರಾಜ್ಯದ ಸಂಘಟಿತ ವಲಯದ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಏಳಿಗೆಗಾಗಿ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ (KLWBಯು ವಿದ್ಯಾರ್ಥಿ ವೇತನ ಯೋಜನೆ ಆರಂಭಿಸಿದೆ. ಕಾರ್ಮಿಕರ ಮಕ್ಕಳು ಕೂಡ ಶಿಕ್ಷಣದಲ್ಲಿ ಮುಂದುವರಿಯಲು ಪ್ರೋತ್ಸಾಹಿಸುವುದು ಯೋಜನೆಯ ಉದ್ದೇಶವಾಗಿದೆ. ಯೋಜನೆ ಅನ್ವಯ 2025ನೇ ಸಾಲಿನಲ್ಲಿ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಇದಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪ್ರೌಢ ಶಾಲೆಯಿಂದ ಪೋಸ್ಟ್ ಗ್ರ್ಯಾಜುಯೇಷನ್, ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್ ಮಾಡುವವರಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಅರ್ಜಿ ಸಲ್ಲಿಕೆಗೆ ಡಿಸೆಂಬರ್ 31 ಕೊನೆಯ ದಿನವಾಗಿದೆ. ಅಭ್ಯರ್ಥಿಗಳು www.klwbapps.karnataka.gov.in ಗೆ ಭೇಟಿ ನೀಡುವ ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಮಾನದಂಡಗಳು ಏನೇನು?
ವಿದ್ಯಾರ್ಥಿ ವೇತನ ನೀಡಲು ಹಲವು ಮಾನದಂಡಗಳನ್ನು ರೂಪಿಸಲಾಗಿದೆ. ಅರ್ಜಿ ಸಲ್ಲಿಸುವವರು ಸಂಘಟಿತ ವಲಯದ ಕಾರ್ಮಿಕರ ಮಕ್ಕಳಾಗಿರಬೇಕು. ವಿದ್ಯಾರ್ಥಿಗಳ ತಂದೆ ಅಥವಾ ತಾಯಿಯ ವೇತನ ಮಾಸಿಕ 35 ಸಾವಿರ ರೂಪಾಯಿ ಮೀರಿರಬಾರದು. ಹಳೆಯ ಶೈಕ್ಷಣಿಕ ವರ್ಷದಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಕನಿಷ್ಠ 50% ಅಂಕ, ಪ.ಜಾತಿ/ಪ.ಪಂಗಡ ವಿದ್ಯಾರ್ಥಿಗಳು ಕನಿಷ್ಠ 45% ಅಂಕ ಪಡೆದಿರಬೇಕು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ಕಾರ್ಮಿಕ ಕಲ್ಯಾಣ ಭವನ, ನಂ. 48, 1ನೇ ಮತ್ತು 2ನೇ ಮಹಡಿ, ಮತ್ತಿಕೆರೆ ಮುಖ್ಯರಸ್ತೆ, ಯಶವಂತಪುರ, ಬೆಂಗಳೂರು – 560022. ದೂರವಾಣಿ ಸಂಖ್ಯೆ: 080-23475188 / 8277291175 / 8277120505.



















